ನವದೆಹಲಿ: ಅಮೇಜಾನ್ ಸಂಸ್ಥೆ ಭಾರತದ ಎಫ್ಡಿಐ ನೀತಿ, ಫೆಮಾ ಕಾಯ್ದೆ ಮೊದಲಾದ ಕಾನೂನಗಳ ಉಲ್ಲಂಘನೆಗಳನ್ನ ಮಾಡಿದ್ದು ನಿಯಮ ಮೀರಿ ಕಡಿಮೆ ಬೆಲೆಗಳಿಗೆ ಸರಕುಗಳ ಮಾರಾಟ ಮಾಡಿ ಕೋಟ್ಯಂತರ ಸಣ್ಣ ವರ್ತಕರ ವ್ಯಾಪಾರಕ್ಕೆ ಸಂಚಕಾರ ತಂದಿದೆ ಎಂದು ಸಿಎಐಟಿ ಆರೋಪಿಸಿದೆ.

ಆನ್ಲೈನ್ ಮಾರಾಟ ಸಂಸ್ಥೆ ಅಮೇಜಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತದ ವ್ಯಾಪಾರಸ್ಥರ ಒಕ್ಕೂಟ ಸಿಎಐಟಿ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದು ಮನವಿ ಮಾಡಿದೆ. ಅಮೇಜಾನ್ ಸಂಸ್ಥೆ ಕಡಿಮೆ ಬೆಲೆಗಳಿಗೆ ಮಾರಾಟ ಮಾಡಿ ಸಣ್ಣ ವರ್ತಕರ ವ್ಯವಹಾರಕ್ಕೆ ಸಂಚಕಾರ ತಂದಿದೆ ಎಂದು ವರ್ತಕರ ಒಕ್ಕೂಟ ಆರೋಪಿಸಿದೆ.

2012ರಲ್ಲಿ ಭಾರತದಲ್ಲಿ ಅಮೇಜಾನ್ ಕಾಲಿಟ್ಟಾಗಿನಿಂದಲೂ ದೇಶದ ಕಾನೂನಿ, ನಿಯಮ ನಿಬಂಧನೆಗಳನ್ನ ಘಂಟಾಘೋಷವಾಗಿ ಉಲ್ಲಂಘಿಸುತ್ತಾ ಬಂದಿದೆ. ಕಡಿಮೆ ಬೆಲೆಗಳಿಗೆ ಮಾರಾಟ ಮಾಡುವ ಮೂಲಕ ದೇಶದ ಕೋಟ್ಯಂತರ ಸಣ್ಣ ವರ್ತಕರ ಬಾಳನ್ನು ನರಕ ಮಾಡಿದೆ. ಈ ಬಗ್ಗೆ ಎಲ್ಲಾ ರೀತಿಯ ಮಾಹಿತಿ ಮತ್ತು ದಾಖಲೆಗಳ ಸಮೇತ ತಾನು ಇಡಿ ತನಿಖಾ ಸಂಸ್ಥೆಗೆ ಪತ್ರ ಬರೆದಿರುವುದಾಗಿ ಸಿಎಐಟಿ ತಿಳಿಸಿದೆ.










