

ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸರಪಾಡಿ ಅಲ್ಲಿಪಾದೆ ಎಂಬಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗೆ ಸೇರಿದ ದಂಪತಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳಿಗೆ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ.
2022ರ ಅಕ್ಟೋಬರ್ 24ರಂದು ರಾತ್ರಿ ಜಾಗದ ತಕರಾರಿನ ವಿಚಾರದಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಮನಸ್ತಾಪ ಉಂಟಾಗಿತ್ತು. ಈ ವೇಳೆ ಪರಿಶಿಷ್ಟ ಜಾತಿಗೆ ಸೇರಿದ ರಾಜೇಶ್ ಮತ್ತು ಅವರ ಪತ್ನಿ ಮೇಲೆ ನೆರೆಮನೆಯ ನಿವಾಸಿಗಳಾದ ಕೃಷ್ಣಪ್ಪ ನಾಯ್ಕ್, ಆತನ ಪತ್ನಿ ಜಯಂತಿ, ಮಗ ವಿನೋದ್, ಪಕ್ಕದ ಮನೆಯವರಾದ ಮನೂ ಮತ್ತು ಲಕ್ಷ್ಮಣ ಸೇರಿದಂತೆ ಇತರ ನಾಲ್ಕೈದು ಜನರು ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಾರೆ ಎಂದು ದೂರು ನೀಡಲಾಗಿತ್ತು.
ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ: 79/2022, ಕಲಂ: 307, 143, 147, 148, 323, 324, 325, 354, 342, 452 r/w 34 IPC ಹಾಗೂ SC/ST Act ನ 3(1)(w)(i), 3(2)(va)(V) ಅಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಆಗಿನ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾಗಿದ್ದ ಪ್ರತಾಪ್ ಸಿಂಗ್ ಥೋರಟ್ ನಡೆಸಿ, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ರವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಾದ ಕೃಷ್ಣಪ್ಪ ನಾಯ್ಕ್, ಜಯಂತಿ, ಮುನ್ನ @ ಹೇಮಂತ್ ನಾಯ್ಕ್, ವಿಶ್ವನಾಥ, ಭೋಜ, ಹರಿ @ ಹರಿಶ್ಚಂದ್ರ, ಗುಲಾಬಿ ಹಾಗೂ ರುಕ್ಮಿಣಿ ಎಂಬ 8 ಮಂದಿಗೆ ನವೆಂಬರ್ 5, 2026 ರಂದು ಒಟ್ಟು ರೂ. 1,01,000 ದಂಡ ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ್ ನಾಯಕ್ ಸಮರ್ಥವಾಗಿ ವಾದ ಮಂಡಿಸಿದ್ದರು.








