




ನವದೆಹಲಿ: ಅಮೆರಿಕದಲ್ಲಿ ಪಾರ್ಟ್‌ಟೈಮ್ ಪಿಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ ಯುವಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ನಕಲಿ ಪಿಜ್ಜಾ ಆರ್ಡರ್ ನೀಡಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ಯುವಕನನ್ನು ಅಂಶುಲ್ ಕುಂಚಾ(28) ಎಂದು ಗುರುತಿಸಲಾಗಿದೆ. ಅವರು ಅಮೆರಿಕದ ಫಿಲಡೆಲ್ಫಿಯಾ ನಗರದಲ್ಲಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ವಾರಾಂತ್ಯದಲ್ಲಿ ಹೆಚ್ಚುವರಿ ಆದಾಯಕ್ಕಾಗಿ ಪಿಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದರು.
ಶನಿವಾರ ರಾತ್ರಿ ಅಂಶುಲ್ ಅವರಿಗೆ ಪಿಜ್ಜಾ ಡೆಲಿವರಿ ಆರ್ಡರ್ ಬಂದಿತ್ತು. ಆರ್ಡರ್ ನೀಡಿದ್ದ ಸ್ಥಳಕ್ಕೆ ತಲುಪಿದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಅಂಶುಲ್ ಅವರ ತಲೆಗೆ ಹಲವು ಬಾರಿ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾನೆ.
ಅಂಶುಲ್ ಅವರ ಸಹೋದರಿ ತನ್ವಿ, ಇದು ಪೂರ್ವಯೋಜಿತ ಸಂಚು ಎಂದು ಆರೋಪಿಸಿದ್ದು, ನಕಲಿ ಪಿಜ್ಜಾ ಆರ್ಡರ್ ಮೂಲಕ ಅಂಶುಲ್ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸುಮಾರು ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದ ಅಂಶುಲ್ ಅವರ ಪಾರ್ಥಿವ ಶರೀರವನ್ನು ಶೀಘ್ರವೇ ಭಾರತಕ್ಕೆ ತರಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಜೊತೆಗೆ ಹತ್ಯೆ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ನಡುವೆ, ನ್ಯೂಯಾರ್ಕ್‌ನ ಭಾರತೀಯ ರಾಯಭಾರ ಕಚೇರಿ ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿದ್ದು, ಸ್ಥಳೀಯ ಅಧಿಕಾರಿಗಳು ಹಾಗೂ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು ಅಗತ್ಯ ಸಹಾಯ ನೀಡಲಾಗುತ್ತಿದೆ ಎಂದು ತಿಳಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.








