ಇಂದು ಡಾ ಕೆ ಶಿವರಾಮ ಕಾರಂತರ ಜನ್ಮದಿನ


ಒಂದು ನದಿಗೆ ಅದರ ದಡಗಳೇ ಮಿತಿ. ಒಂದು ಪರ್ವತಕ್ಕೆ ಅದರ ಎತ್ತರವೇ ಮಿತಿ. ಆದರೆ ಕೆಲವು ವ್ಯಕ್ತಿತ್ವಗಳಿಗೆ ಇಂಥ ಮಿತಿಗಳನ್ನು ವಿಧಿಸಲು ಸಾಧ್ಯವಿಲ್ಲ. ಅವರು ಬದುಕಿದಷ್ಟೂ ಕಾಲ ಬದುಕು ವಿಸ್ತರಿಸುತ್ತಲೇ ಹೋಗುತ್ತದೆ; ಅವರು ಮುಟ್ಟಿದಷ್ಟು ಕ್ಷೇತ್ರಗಳು ಹೊಸ ಅರ್ಥವನ್ನು ಪಡೆಯುತ್ತವೆ. ಶಿವರಾಮ ಕಾರಂತರು ಅಂತಹ ಅಪರೂಪದ ವ್ಯಕ್ತಿ. ಅವರ ನೆನಪಿನೊಡನೆ ಕರಾವಳಿಯ ಮಣ್ಣು, ಸಮುದ್ರದ ಅಲೆ, ಯಕ್ಷಗಾನದ ಬಯಲು, ಮಕ್ಕಳ ಲೋಕ, ವಿಜ್ಞಾನದ ಕುತೂಹಲ ಮತ್ತು ಸಮಾಜವನ್ನು ಪ್ರಶ್ನಿಸುವ ನಿರ್ಭೀತ ಮನಸ್ಸು ಎಲ್ಲವೂ ಒಂದೇ ಬಾರಿಗೆ ನಮ್ಮ ಕಣ್ಣ ಮುಂದೆ ಬರುತ್ತದೆ.
ಸಮುದ್ರವನ್ನು ದಡದಲ್ಲಿ ನಿಂತು ನೋಡುವುದು ಸುಲಭ. ಅದರ ಆಳವನ್ನು ಅರಿಯುವುದು ಅಷ್ಟು ಸುಲಭವಲ್ಲ. ಕಣ್ಣಿಗೆ ಕಾಣುವುದು ಅಲೆಗಳ ನಿರಂತರ ಚಲನೆ, ದಡಕ್ಕೆ ಬಂದು ಕರಗುವ ನೊರೆ, ದೂರದವರೆಗೆ ಹರಡಿಕೊಂಡ ನೀಲಿಯ ವಿಸ್ತಾರ. ಆದರೆ ಆ ನೀಲಿಯ ಒಳಗಡೆ ಅಡಗಿರುವ ಜೀವಜಗತ್ತು, ಚಲನೆ, ಸಂಘರ್ಷ ಮತ್ತು ವಿಸ್ಮಯಗಳು ಮೇಲ್ಮೈಯಿಂದ ಗೋಚರಿಸುವುದಿಲ್ಲ. ಕೋಟ ಶಿವರಾಮ ಕಾರಂತರ ವ್ಯಕ್ತಿತ್ವವೂ ಇಂಥದ್ದೇ. ಅವರನ್ನು ದೂರದಿಂದ ನೋಡಿದರೆ ಕನ್ನಡದ ಮಹತ್ವದ ಸಾಹಿತಿ ಕಾಣಿಸುತ್ತಾರೆ. ಹತ್ತಿರ ಹೋದಂತೆ ಕಾದಂಬರಿಕಾರ, ಸಂಶೋಧಕ, ಶಿಕ್ಷಣತಜ್ಞ, ಕಲಾವಿಚಾರಕ, ಯಕ್ಷಗಾನಾಸಕ್ತ, ಪ್ರವಾಸಿ, ಪರಿಸರ ಚಿಂತಕ, ಪತ್ರಕರ್ತ, ಸಮಾಜ ವಿಮರ್ಶಕ, ಮಕ್ಕಳ ಸಾಹಿತಿ ಹೀಗೆ ಒಂದರ ಹಿಂದೆ ಒಂದಾಗಿ ಹಲವು ಮುಖಗಳು ತೆರೆದುಕೊಳ್ಳುತ್ತವೆ. ಕೊನೆಗೆ ಅವರನ್ನು ಒಂದೇ ಚೌಕಟ್ಟಿನೊಳಗೆ ಹಿಡಿದಿಡುವುದು ಸಾಧ್ಯವಿಲ್ಲವೆಂಬ ಅರಿವು ಮೂಡುತ್ತದೆ. ಇದೇ ಕಾರಂತರ ವಿಸ್ಮಯ.
1902ರ ಅಕ್ಟೋಬರ್ 10ರಂದು ಕೋಟ ಶೇಷ ಕಾರಂತ ಮತ್ತು ಲಕ್ಷ್ಮೀ ಅಮ್ಮನವರ ಪುತ್ರನಾಗಿ ಕೋಟದಲ್ಲಿ ಜನಿಸಿದ ಶಿವರಾಮ ಕಾರಂತರು ಮುಂದೆ ಪುತ್ತೂರನ್ನು ತಮ್ಮ ಚಟುವಟಿಕೆಗಳ ಪ್ರಮುಖ ನೆಲೆಯನ್ನಾಗಿ ಮಾಡಿಕೊಂಡರು. ಕರಾವಳಿಯ ಮಣ್ಣು, ಸಮುದ್ರ, ಪ್ರಕೃತಿ, ಜನಜೀವನ ಮತ್ತು ಅಲ್ಲಿನ ಸಾಮಾಜಿಕ ಚಲನೆಗಳು ಅವರ ಮನಸ್ಸಿಗೆ ಹತ್ತಿರವಾಗಿದ್ದವು. ಆದರೆ ಅವರು ಸುತ್ತಲಿನ ಜಗತ್ತನ್ನು ಕೇವಲ ಕಂಡು ಸಂತೃಪ್ತರಾದವರಲ್ಲ. ಕಂಡದ್ದನ್ನು ಪ್ರಶ್ನಿಸಿದರು; ಪ್ರಶ್ನಿಸಿದುದರ ಹಿಂದಿನ ಕಾರಣವನ್ನು ಹುಡುಕಿದರು; ಹುಡುಕಿದ ಅನುಭವವನ್ನು ಬರಹದಲ್ಲಿ ದಾಖಲಿಸಿದರು. ಹೀಗೆ ಅವರೊಳಗೆ ಸದಾ ಎಚ್ಚರವಾಗಿದ್ದ ಈ ಜಿಜ್ಞಾಸೆಯೇ ಅವರ ವ್ಯಕ್ತಿತ್ವದ ದೊಡ್ಡ ಶಕ್ತಿ.
ಕಾರಂತರನ್ನು ಕೇವಲ ಸಾಹಿತಿ ಎಂದು ಕರೆಯುವುದು ಅವರ ವ್ಯಕ್ತಿತ್ವವನ್ನು ಸೀಮಿತಗೊಳಿಸಿದಂತಾಗುತ್ತದೆ. ಸಾಹಿತ್ಯ ಅವರ ಬದುಕಿನ ಒಂದು ದೊಡ್ಡ ಭಾಗವಾದರೂ, ಅವರ ಆಸಕ್ತಿಯ ವ್ಯಾಪ್ತಿ ಅದಕ್ಕಿಂತ ಬಹಳ ವಿಶಾಲವಾಗಿತ್ತು. ಕಾವ್ಯ, ಕಾದಂಬರಿ, ಸಣ್ಣಕಥೆ, ನಾಟಕ, ಪ್ರಬಂಧ, ಹರಟೆ, ವ್ಯಂಗ್ಯ, ಜೀವನಚರಿತ್ರೆ, ಪ್ರವಾಸ ಸಾಹಿತ್ಯ, ಶಿಶುಸಾಹಿತ್ಯ, ವಿಜ್ಞಾನ ಸಾಹಿತ್ಯ, ಅನುವಾದ, ಪತ್ರಿಕೋದ್ಯಮ, ಕಲಾ ಸಾಹಿತ್ಯ, ವಾಸ್ತುಶಿಲ್ಪ, ಯಕ್ಷಗಾನ, ಪರಿಸರ, ಶಿಕ್ಷಣ ಅವರ ಆಸಕ್ತಿಯ ಕ್ಷೇತ್ರಗಳಾಗಿದ್ದು, ಅವು ಒಂದರ ನಂತರ ಒಂದಾಗಿ ವಿಸ್ತರಿಸುತ್ತಲೇ ಹೋದವು. ಯಾವುದೇ ವಿಷಯದ ಮುಂದೆ ನಿಂತಾಗ ‘ಇದು ನನ್ನ ಕ್ಷೇತ್ರವಲ್ಲ’ ಎಂದು ಹಿಂದೆ ಸರಿಯುವ ಮನಸ್ಸು ಅವರದಲ್ಲ. ತಿಳಿಯಬೇಕೆಂಬ ಕುತೂಹಲ ಇದ್ದಲ್ಲಿ ಅವರು ಅಲ್ಲಿಗೆ ಕಾಲಿಟ್ಟರು. ಈ ಬಹುಮುಖತೆಯ ಕಾರಣದಿಂದಲೇ ಅವರಿಗೆ ‘ಕಡಲ ತೀರದ ಭಾರ್ಗವ’, ‘ಜಂಗಮ ವಿಶ್ವಕೋಶ’ ಎಂಬ ಬಿರುದುಗಳು ಬಂದವು. ಆದರೆ ಈ ಬಿರುದುಗಳಿಗಿಂತಲೂ ಮುಖ್ಯವಾದುದು ಅವುಗಳ ಹಿಂದೆ ಇರುವ ಕಾರಂತರ ಜೀವಂತ ಚೇತನ. ಅವರು ತಿಳಿದದ್ದರಲ್ಲಿ ನಿಲ್ಲಲಿಲ್ಲ; ತಿಳಿಯದ ಕಡೆಗೆ ನಿರಂತರವಾಗಿ ಹೆಜ್ಜೆ ಹಾಕಿದರು. ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ ತಕ್ಷಣ ಮತ್ತೊಂದು ಕ್ಷೇತ್ರದ ಬಾಗಿಲು ತಟ್ಟಿದರು. ಹೀಗಾಗಿ ಅವರ ಬದುಕನ್ನು ಸಾಧನೆಗಳ ಪಟ್ಟಿಯಾಗಿ ನೋಡುವುದಕ್ಕಿಂತ, ನಿರಂತರ ಅನ್ವೇಷಣೆಯ ಪಯಣವಾಗಿ ನೋಡುವುದೇ ಹೆಚ್ಚು ಸೂಕ್ತ.
ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಕಾರಂತರ ಸ್ಥಾನ ವಿಶಿಷ್ಟ. ಅವರ ಕಾದಂಬರಿಗಳಲ್ಲಿ ಬದುಕು ಅಲಂಕೃತಗೊಳ್ಳುವುದಿಲ್ಲ. ಅದು ತನ್ನ ಸಹಜ ರೂಪದಲ್ಲೇ ನಮ್ಮ ಮುಂದೆ ನಿಲ್ಲುತ್ತದೆ. ಕರಾವಳಿಯ ನೆಲ, ಅಲ್ಲಿನ ಜನ, ಅವರ ಸಂಪ್ರದಾಯಗಳು, ಸಂಬಂಧಗಳು, ಬಯಕೆಗಳು, ಸಾಮಾಜಿಕ ಅಸಮಾನತೆಗಳು, ಬದುಕಿನ ಸಂಘರ್ಷಗಳು ಎಲ್ಲವೂ ಅವರ ಕಥನದೊಳಗೆ ಸಹಜವಾಗಿ ಬೆರೆತುಹೋಗುತ್ತವೆ. ಅವರ ಪಾತ್ರಗಳು ಒಂದೇ ಮಾದರಿಯಲ್ಲಿ ರೂಪುಗೊಂಡಿಲ್ಲ. ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಮನಸ್ಸು, ಹಿನ್ನೆಲೆ, ಆಸೆ, ದೌರ್ಬಲ್ಯ ಮತ್ತು ಸಂಘರ್ಷವಿದೆ. ಅದರಿಂದಾಗಿ ಅವರ ಕಾದಂಬರಿಗಳು ಕೇವಲ ಘಟನೆಗಳ ಸರಣಿಯಾಗದೆ ಮನುಷ್ಯನ ಒಳಜಗತ್ತಿನ ಅನ್ವೇಷಣೆಯಾಗುತ್ತವೆ.
ಗಂಡು-ಹೆಣ್ಣಿನ ಸಂಬಂಧವಾಗಲೀ, ಕುಟುಂಬದೊಳಗಿನ ಬಿಕ್ಕಟ್ಟಾಗಲೀ, ಸಾಮಾಜಿಕ ಅಸಮಾನತೆಯಾಗಲೀ, ವ್ಯಕ್ತಿಯ ಬದುಕಿನ ಅರ್ಥದ ಹುಡುಕಾಟವಾಗಲೀ ಅದರ ಹಿಂದೆ ಕೆಲಸ ಮಾಡುವ ಮನುಷ್ಯನ ಮನಸ್ಸನ್ನು ಕಾರಂತರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಪಾತ್ರಗಳು ತಮ್ಮ ಭಾವನೆಗಳನ್ನು ದೊಡ್ಡ ದೊಡ್ಡ ಮಾತುಗಳಲ್ಲಿ ಹೇಳುವುದಕ್ಕಿಂತ, ಬದುಕುತ್ತಿರುವ ಸನ್ನಿವೇಶಗಳ ಮೂಲಕವೇ ಅವುಗಳನ್ನು ವ್ಯಕ್ತಪಡಿಸುತ್ತವೆ. ಇದರಿಂದ ಅವರ ಸಾಹಿತ್ಯಕ್ಕೆ ಒಂದು ಸಹಜವಾದ ಮನೋವೈಜ್ಞಾನಿಕ ಆಳ ದೊರೆಯುತ್ತದೆ. ‘ಚೋಮನ ದುಡಿ’, ‘ಸರಸಮ್ಮನ ಸಮಾಧಿ’, ‘ಮರಳಿ ಮಣ್ಣಿಗೆ’ ಮೊದಲಾದ ಕೃತಿಗಳು ಈ ಕಾರಣದಿಂದಲೇ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿವೆ. ಅವು ಕಥೆಗಳಷ್ಟೇ ಅಲ್ಲ; ಒಂದು ಕಾಲದ ಸಾಮಾಜಿಕ ಬದುಕಿನ ದಾಖಲೆಗಳೂ ಹೌದು.
ಕಾರಂತರ ಸಾಹಿತ್ಯದ ಮತ್ತೊಂದು ಮುಖ್ಯ ಗುಣ ಅದರ ಅನುಭವಜನ್ಯತೆ. ಅವರು ಬದುಕಿನಿಂದ ದೂರ ನಿಂತು ಬದುಕನ್ನು ಕಲ್ಪಿಸಿಕೊಂಡವರಲ್ಲ. ಜನರನ್ನು ಗಮನಿಸಿದರು, ಅವರ ಬದುಕಿನೊಂದಿಗೆ ಬೆರೆತರು, ಸಮಾಜದ ಬದಲಾವಣೆಗಳನ್ನು ಕಂಡರು, ಪ್ರಕೃತಿಯ ಚಲನೆಯನ್ನು ಅನುಭವಿಸಿದರು. ಆ ಅನುಭವಗಳು ಅವರ ಬರಹದೊಳಗೆ ರೂಪಾಂತರಗೊಂಡವು. ಹೀಗಾಗಿ ಅವರ ಕೃತಿಗಳಲ್ಲಿ ಕೃತಕತೆಗಿಂತ ಬದುಕಿನ ವಾಸನೆ ಹೆಚ್ಚಾಗಿ ಕಾಣುತ್ತದೆ. ಅವರ ಸಾಹಿತ್ಯವನ್ನು ಓದುವಾಗ ಪಾತ್ರಗಳು ಪುಸ್ತಕದ ಪುಟಗಳಿಂದ ಹೊರಬಂದು ನಮ್ಮ ಸುತ್ತಲಿನ ಜನರಂತೆ ಕಾಣಿಸುವುದಕ್ಕೆ ಇದೇ ಕಾರಣ.
ಬರವಣಿಗೆಯಲ್ಲಿಯೂ ಕಾರಂತರಿಗೆ ತಮ್ಮದೇ ಆದ ಕ್ರಮವಿತ್ತು. ಒಂದು ಕಥೆಯ ಬೀಜ ಅಥವಾ ಅದರ ಸ್ಥೂಲ ರೂಪ ಮನಸ್ಸಿನಲ್ಲಿ ಮೂಡಿದರೆ, ಅದನ್ನು ಪೂರ್ಣಗೊಳಿಸುವವರೆಗೆ ಏಕಾಗ್ರತೆಯಿಂದ ತೊಡಗಿಸಿಕೊಳ್ಳುವ ಸ್ವಭಾವ ಅವರದು. ಬರವಣಿಗೆ ಅವರಿಗೆ ಮನಸ್ಸಿನಲ್ಲಿ ಸಂಗ್ರಹವಾಗುತ್ತಿದ್ದ ಅನುಭವಗಳಿಗೆ ದಾರಿ ಮಾಡಿಕೊಡುವ ಒಂದು ಸೃಜನಾತ್ಮಕ ಅನಿವಾರ್ಯತೆಯಾಗಿತ್ತು. ಅವರ ಬರಹದ ವೇಗದ ಹಿಂದೆ ವರ್ಷಗಳ ಗಮನ, ಅನುಭವ ಮತ್ತು ಚಿಂತನೆ ಅಡಗಿತ್ತು.
ಶಿಕ್ಷಣದ ಕುರಿತೂ ಅವರ ಚಿಂತನೆ ದೂರದೃಷ್ಟಿಯದ್ದಾಗಿತ್ತು. ಮಕ್ಕಳಲ್ಲಿರುವ ಸುಪ್ತ ಸಾಮರ್ಥ್ಯವನ್ನು ಹೊರತಂದು ಅವರ ಕುತೂಹಲವನ್ನು ಬೆಳೆಸುವುದೇ ಶಿಕ್ಷಣದ ಉದ್ದೇಶವೆಂದು ಅವರು ನಂಬಿದ್ದರು. ಈ ದೃಷ್ಟಿಯಿಂದ ‘ಸಿರಿಗನ್ನಡ ಪಾಠಮಾಲೆ’ಯಂತಹ ಕೃತಿಗಳನ್ನು ರಚಿಸಿದರು. ವಯಸ್ಕರ ಶಿಕ್ಷಣಕ್ಕಾಗಿ ‘ಜೋಗಿ ಕಂಡ ಊರು’ ಬರೆದರು. ಮಕ್ಕಳಿಗೆ ತಮ್ಮ ಸುತ್ತಲಿನ ನೆಲ-ಜೀವನದ ಪರಿಚಯವಾಗಬೇಕೆಂಬ ಉದ್ದೇಶದಿಂದ ‘ಚಿತ್ರಮಯ ದಕ್ಷಿಣ ಕನ್ನಡ’ವನ್ನು ಪ್ರಕಟಿಸಿದರು. ಲೋಕಜ್ಞಾನವನ್ನು ವಿಸ್ತರಿಸುವ ನಿಟ್ಟಿನಲ್ಲಿ ‘ಬಾಲಪ್ರಪಂಚ’, ‘ಅದ್ಭುತ ಜಗತ್ತು’ ಮೊದಲಾದ ಕೃತಿಗಳನ್ನು ನೀಡಿದರು. ವಿಜ್ಞಾನ ವಿಷಯಗಳನ್ನೂ ಸಾಮಾನ್ಯ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಪರಿಚಯಿಸುವ ಪ್ರಯತ್ನವಾಗಿ ‘ವಿಜ್ಞಾನ ಪ್ರಪಂಚ’ವನ್ನು ರಚಿಸಿದರು. ಹೀಗಾಗಿ ಅವರ ಬರವಣಿಗೆ ಕೇವಲ ಸಾಹಿತ್ಯ ಸೃಷ್ಟಿಯಲ್ಲ; ಜ್ಞಾನವನ್ನು ಜನಸಾಮಾನ್ಯರ ಬಳಿಗೆ ತಲುಪಿಸುವ ಒಂದು ಸಾಮಾಜಿಕ ಪ್ರಯತ್ನವೂ ಆಗಿತ್ತು.
‘ರಾಷ್ಟ್ರಗೀತ ಸುಧಾಕರ’ದಿಂದ ಆರಂಭವಾದ ಅವರ ಸಾಹಿತ್ಯಯಾನ ನಂತರ ಹಲವು ದಿಕ್ಕುಗಳಿಗೆ ಹರಡಿತು. ‘ಅಬೂವಿನಿಂದ ಬರಾಮಕ್ಕೆ ಕೃತಿಯಲ್ಲಿ ಪ್ರವಾಸದ ಅನುಭವ ಮೂಡಿದರೆ, ‘ಅಪೂರ್ವ ಪಶ್ಚಿಮ’ದಲ್ಲಿ ವಿದೇಶ ಪ್ರವಾಸದ ನೋಟಗಳು ಕಾಣಿಸಿಕೊಂಡವು. ‘ಕಲೆಯ ದರ್ಶನ’ದಲ್ಲಿ ಕಲೆ ಮತ್ತು ಶಿಲ್ಪದ ವಿಚಾರಗಳನ್ನು ಪರಿಚಯಿಸಿದರು. ‘ಬಾಳ್ವೆಯೇ ಬೆಳಕು’ ಕೃತಿಯಲ್ಲಿ ಜೀವನದ ಧ್ಯೇಯದ ಕುರಿತ ಚಿಂತನೆಗಳನ್ನು ದಾಖಲಿಸಿದರು. ಸಾಮಾಜಿಕ ವೈರುಧ್ಯಗಳನ್ನು ವ್ಯಂಗ್ಯದ ಮೂಲಕ ಬಿಂಬಿಸುವ ಕೃತಿಗಳನ್ನೂ ರಚಿಸಿದರು. ‘ಮುಕ್ತದ್ವಾರ’, ‘ಕಿಸಾಗೋತಮಿ’ಯಂತಹ ಗೀತನಾಟಕಗಳು, ‘ಹಾವು’, ‘ಹಸಿವು’ನಂತಹ ಸಣ್ಣಕಥಾ ಸಂಕಲನಗಳು ಅವರ ಸೃಜನಶೀಲ ವ್ಯಾಪ್ತಿಗೆ ಸಾಕ್ಷಿಯಾಗಿವೆ. ಪತ್ತೇದಾರಿ ಕಾದಂಬರಿಗಳಿಂದ ಆರಂಭಿಸಿ ಸುಮಾರು ನಲುವತ್ತಾರು ಕಾದಂಬರಿಗಳ ಮೂಲಕ ಅವರು ಕನ್ನಡ ಕಾದಂಬರಿ ಲೋಕವನ್ನು ಸಮೃದ್ಧಗೊಳಿಸಿದರು.
ಯಕ್ಷಗಾನ ಕ್ಷೇತ್ರದಲ್ಲಿಯೂ ಅವರ ಆಸಕ್ತಿ ಕೇವಲ ರಸಿಕನ ಮಟ್ಟದಲ್ಲಿರಲಿಲ್ಲ. ಅದರ ಇತಿಹಾಸ, ಸ್ವರೂಪ, ಕಲಾತ್ಮಕತೆ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಅಧ್ಯಯನ ಮಾಡಿ ‘ಯಕ್ಷಗಾನ ಬಯಲಾಟ’ದಂತಹ ಕೃತಿಗಳನ್ನು ರಚಿಸಿದರು. ವಾಸ್ತುಶಿಲ್ಪ, ಚಿತ್ರಕಲೆ, ನೃತ್ಯ, ಜನಪದ, ಪ್ರಜಾಪ್ರಭುತ್ವ, ಪರಿಸರ ಇವುಗಳ ಬಗೆಗಿನ ಅವರ ಬರಹಗಳು ಚಿಂತನೆಯ ವ್ಯಾಪ್ತಿಯನ್ನು ತೋರಿಸುತ್ತವೆ. ತಮ್ಮ ಬದುಕಿನ ಅನುಭವಗಳನ್ನು ‘ಹುಚ್ಚು ಮನಸ್ಸಿನ ಹತ್ತು ಮುಖಗಳು’, ‘ಸ್ಮೃತಿ ಪಟಲದಿಂದ’ ಮೊದಲಾದ ಕೃತಿಗಳಲ್ಲಿ ದಾಖಲಿಸುವ ಮೂಲಕ ತಮ್ಮೊಳಗಿನ ವ್ಯಕ್ತಿಯನ್ನೂ ಓದುಗರ ಮುಂದೆ ತೆರೆದಿಟ್ಟರು.
ಕಾರಂತರ ಬರಹದಲ್ಲಿ ಸಮಾಜದ ಮೇಲಿನ ಕಾಳಜಿಯೂ ಅಷ್ಟೇ ಗಾಢ. ಬದುಕಿನ ಸಣ್ಣತನ, ವಂಚನೆ, ಕ್ರೌರ್ಯ, ಅಧಿಕಾರದ ಹಪಹಪಿ, ಕೃತಕ ಪ್ರತಿಷ್ಠೆ ಮತ್ತು ಅನ್ಯಾಯಗಳನ್ನು ಅವರು ಪ್ರಶ್ನಿಸಿದರು. ಆದರೆ ಅವರ ವಿಮರ್ಶೆಯಲ್ಲಿ ಕೇವಲ ಆಕ್ರೋಶವಿರಲಿಲ್ಲ. ಮನುಷ್ಯನ ದೌರ್ಬಲ್ಯವನ್ನು ಅರ್ಥಮಾಡಿಕೊಳ್ಳುವ ಮಾನವೀಯ ದೃಷ್ಟಿಯೂ ಇತ್ತು. ಅಸಹಾಯಕ ಬದುಕುಗಳನ್ನು ಅವರು ದೂರದಿಂದ ನೋಡಿ ತೀರ್ಪು ನೀಡುವ ಬದಲು ಅವುಗಳೊಳಗೆ ಇಳಿದು ನೋಡಿದರು. ಇದೇ ಕಾರಣಕ್ಕೆ ಅವರ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆಯೊಂದಿಗೆ ಮಾನವೀಯ ಮಿಡಿತವೂ ಕಾಣುತ್ತದೆ.
ಕಾರಂತರ ಮಹತ್ವ ಅವರ ಕೃತಿಗಳ ಸಂಖ್ಯೆಯಲ್ಲಿ ಮಾತ್ರವಿಲ್ಲ. ಅವರು ಕನ್ನಡದ ಸೃಜನಶೀಲ ಮನಸ್ಸಿಗೆ ಒಂದು ಹೊಸ ಚಲನೆಯನ್ನು ಒದಗಿಸಿದರು. ಒಂದು ಕ್ಷೇತ್ರದಲ್ಲಿ ಪರಿಣತಿ ಪಡೆದ ನಂತರ ಅದೇ ಗಡಿಯೊಳಗೆ ಉಳಿಯದೆ, ಹೊಸ ವಿಷಯಗಳನ್ನು ಅರಿಯುವ ಧೈರ್ಯವನ್ನು ತೋರಿದರು. ಅವರ ಬದುಕಿನಲ್ಲಿ ಕಲಿಯುವಿಕೆ, ಪ್ರಯೋಗ, ಅನುಭವ ಮತ್ತು ಸೃಷ್ಟಿ ಈ ನಾಲ್ಕೂ ಅವರ ಬದುಕಿನಲ್ಲಿ ನಿರಂತರವಾಗಿ ಹರಿಯುತ್ತಿದ್ದವು. ಅದಕ್ಕಾಗಿಯೇ ಅವರನ್ನು ಯಾರೊಂದಿಗೂ ಹೋಲಿಸುವುದು ಕಷ್ಟ. ಅವರ ಸಾಧನೆಗೆ ಅವರೇ ಮಾನದಂಡ.
ಕಾರಂತರು ತಮ್ಮ ಕಾಲವನ್ನು ಮಾತ್ರ ದಾಖಲಿಸಿದವರಲ್ಲ. ತಮ್ಮ ಕಾಲದೊಳಗೆ ಮನುಷ್ಯ ಹೇಗೆ ಬದುಕಿದ, ಯಾವ ಮೌಲ್ಯಗಳೊಂದಿಗೆ ಸಂಘರ್ಷಿಸಿದ, ಯಾವ ಕನಸುಗಳನ್ನು ಕಂಡ, ಯಾವ ಸೋಲುಗಳನ್ನು ಅನುಭವಿಸಿದ ಎಂಬುದನ್ನೂ ದಾಖಲಿಸಿದರು. ಅವರ ಕೃತಿಗಳಲ್ಲಿ ಕರಾವಳಿಯ ಮಣ್ಣಿನ ವಾಸನೆಯಿದೆ; ಸಮುದ್ರದ ಉಪ್ಪಿನ ರುಚಿಯಿದೆ; ಹಳ್ಳಿಯ ಬದುಕಿನ ನಾದವಿದೆ; ಮನುಷ್ಯನ ಮನಸ್ಸಿನ ತಲ್ಲಣವಿದೆ. ಸ್ಥಳೀಯತೆಯಿಂದ ಸಾರ್ವತ್ರಿಕತೆಯತ್ತ ಸಾಗುವ ಈ ಗುಣವೇ ಅವರನ್ನು ಕನ್ನಡದ ಮಹತ್ವದ ಸೃಜನಶೀಲರಲ್ಲಿ ಒಬ್ಬರನ್ನಾಗಿ ಮಾಡಿದೆ.
ಸಮುದ್ರವನ್ನು ದಡದಲ್ಲಿ ನಿಂತು ಸಮುದ್ರವನ್ನು ಅಳೆಯಲು ಸಾಧ್ಯವಿಲ್ಲ. ಅದರ ಆಳಕ್ಕೆ ಇಳಿದಷ್ಟೂ ಹೊಸ ಜಗತ್ತು ತೆರೆದುಕೊಳ್ಳುತ್ತದೆ. ಕಾರಂತರ ಸಾಹಿತ್ಯವೂ ಹಾಗೆಯೇ. ಒಂದು ಕೃತಿಯಿಂದ ಇನ್ನೊಂದಕ್ಕೆ ಸಾಗಿದಂತೆ ಮತ್ತೊಬ್ಬ ಕಾರಂತರು ನಮ್ಮ ಮುಂದೆ ನಿಲ್ಲುತ್ತಾರೆ. ಅವರ ಬರಹಗಳನ್ನು ಓದುತ್ತಾ ಹೋದಂತೆ ಅವರ ವ್ಯಕ್ತಿತ್ವದ ವ್ಯಾಪ್ತಿಯೂ ವಿಸ್ತರಿಸುತ್ತಲೇ ಹೋಗುತ್ತದೆ.
ಸಮುದ್ರದ ಅಲೆಗಳು ದಡವನ್ನು ಮುಟ್ಟಿ ಹಿಂದಿರುಗುತ್ತವೆ. ಆದರೆ ಅವು ಬಂದು ಹೋದ ಗುರುತು ಮರಳಿನ ಮೇಲೆ ಉಳಿಯುತ್ತದೆ. ಕಾರಂತರ ಬದುಕೂ ಹಾಗೆಯೇ. ಕಾಲದ ಅಲೆ ಅವರನ್ನು ನಮ್ಮಿಂದ ದೂರ ಮಾಡಿದ್ದರೂ, ಅವರ ಚಿಂತನೆ ಮತ್ತು ಸೃಜನಶೀಲತೆಯ ಗುರುತು ಕನ್ನಡದ ನೆಲದಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ.
✍ಡಾ. ಮೈತ್ರಿ ಭಟ್, ವಿಟ್ಲ








