





ಬೆಂಗಳೂರು: ಉದ್ಯೋಗ ಕೊಡಿಸುವುದಾಗಿ ಯುವಕ- ಯುವತಿಯರಿಂದ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉತ್ತರ ಭಾರತ ಮೂಲದ ಪತ್ನಿಲ್ ಕಲಂದರ್ ಖಾನ್ (43) ಎಂದು ಗುರುತಿಸಲಾಗಿದೆ.
ಆರೋಪಿಯಿಂದ 1.50 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿ ಸುಮಾರು 8 ಅಭ್ಯರ್ಥಿಗಳಿಂದ 14.23 ಲಕ್ಷ ರೂ. ಪಡೆದು ವಂಚಿಸಿದ್ದ. ಈ ಸಂಬಂಧ ಗೀತಾ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
2024ರಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿರುವ ಆರೋಪಿಗೆ ಸೂಕ್ತ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ ಬಿಟಿಎಂ ಲೇಔಟ್‌ನ ಡಾಲರ್ಸ್ ಕಾಲೋನಿಯಲ್ಲಿರುವ ಮ್ಯಾಗ್ನಾಮಿಕ್ಸ್ ಸರ್ವೀಸ್ ಪ್ರೈ.ಲಿ.ನಲ್ಲಿ ಎಚ್‌ಆರ್ ಮತ್ತು ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. ನಂತರ ಸಿಂಥೆಟಿಕ್ ಸಾಫ್ಟ್ ವೇರ್ ಪ್ರೈ.ಲಿ. ಮತ್ತು ಮ್ಯಾಗ್ನಾಮಿಕ್ಸ್ ಸರ್ವೀಸ್ ಪ್ರೈ. ಲಿ. ಕಂಪನಿಗಳಲ್ಲಿ ಕೆಲಸಕ್ಕೆ ಬರುತ್ತಿದ್ದ ಅಭ್ಯರ್ಥಿಗಳ ಬಳಿ, ಇನ್ನು ಉತ್ತಮ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 8 ಅಭ್ಯರ್ಥಿಗಳಿಂದ ಸುಮಾರು 14.23 ಲಕ್ಷ ರೂ. ಪಡೆದುಕೊಂಡಿದ್ದಾನೆ. ಈತನ ಕೃತ್ಯಕ್ಕೆ ವಿರೇಶ್ ಮತ್ತು ಇನಾಯತ್ ಎಂಬುವರ ಸಹಕಾರ ನೀಡಿದ್ದಾರೆ. ಸದ್ಯ ಈ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ವಂಚನೆಗೊಳಗಾದವರ ಪೈಕಿ ಗೀತಾ ಎಂಬುವರು ತನ್ನ ಬಳಿ ಆರೋಪಿ 2.70 ಲಕ್ಷ ರೂ. ಪಡೆದು ಉದ್ಯೋಗ ಕೊಡಿಸದೆ ವಂಚಿಸಿದ್ದಾನೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಹೇಳಿದರು








