




ಅಂಡಮಾನ್ ದ್ವೀಪದಲ್ಲಿ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿದ್ದು, ಈ ಬಗ್ಗೆ ಪೆಟ್ರೋಲಿಯಂ ಖಾತೆ ಸಚಿವ ಹರ್ದಿಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಂಡಮಾನ್ ದ್ವೀಪದಲ್ಲಿ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿರುವ ಬಗ್ಗೆ ತಿಳಿಸಿದ್ದಾರೆ. ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಶ್ರೀ ವಿಜಯಪುರಂ-3ನಲ್ಲಿ 355 ಮೀಟರ್ ಆಳದಲ್ಲಿ ನೈಸರ್ಗಿಕ ಅನಿಲ ಪತ್ತೆಯಾಗಿದೆ. ಇದು ಅಂಡಮಾನ್ ಸಮುದ್ರದ ಅಪಾರ ಇಂಧನ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಜಲಾನಯನ ಪ್ರದೇಶದಲ್ಲಿ ನಡೆಯುತ್ತಿರುವ ಪರಿಶೋಧನಾ ಅಭಿಯಾನದಲ್ಲಿ ಮತ್ತೊಂದು ಯಶಸ್ಸನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಸಮುದ್ರದ 355 ಮೀಟರ್ ನೀರಿನ ಆಳದಲ್ಲಿ, ಭೂಮಿಯ ಒಳಗಡೆ ಸುಮಾರು 1,900 ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿ ಈ ಗ್ಯಾಸ್ ಪತ್ತೆಯಾಗಿದೆ. ಸಿಕ್ಕಿರುವ ಗ್ಯಾಸ್ ಎಂತಹದ್ದು, ಅದರ ಗುಣಮಟ್ಟ ಹೇಗಿದೆ ಮತ್ತು ಅದು ಎಷ್ಟು ಉಪಯುಕ್ತ ಎಂದು ತಿಳಿಯಲು ಆಯಿಲ್ ಇಂಡಿಯಾ ಸಂಸ್ಥೆಯು ಸದ್ಯ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು 2025ರ ಸ್ವಾತಂತ್ರ‍್ಯ ದಿನದಂದು ಘೋಷಿಸಿದ `ಸಮುದ್ರ ಮಂಥನ ಮಿಷನ್’ (ಆಳ ಸಮುದ್ರದ ಸಂಶೋಧನಾ ಯೋಜನೆ) ಅಡಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಅಂಡಮಾನ್ ಭಾಗದಲ್ಲಿ ಕೊರೆದ 3 ಬಾವಿಗಳಲ್ಲಿ ಈಗಾಗಲೇ 2 ಬಾವಿಗಳಲ್ಲಿ ಇಂಧನ ಇರುವುದು ಖಚಿತವಾಗಿದೆ ಎಂದು ತಿಳಿದು ಬಂದಿದೆ.








