


ವಿಧಾನಸಭೆಯಲ್ಲಿ ವಿಪಕ್ಷ ಸದಸ್ಯರ ತೀವ್ರ ವಿರೋಧ ಹಾಗೂ ಗದ್ದಲದ ನಡುವೆಯೇ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಪ್ರತಿಬಂಧನ ಮಸೂದೆ–2025 ಅನ್ನು ಸರ್ಕಾರ ಅಂಗೀಕರಿಸಿತು.


ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಸೂದೆಯನ್ನು ಮಂಡಿಸಿದ್ದು, ಇದಕ್ಕೆ ಪ್ರತಿಪಕ್ಷಗಳು ಕಠಿಣ ಆಕ್ಷೇಪ ವ್ಯಕ್ತಪಡಿಸಿದವು. ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮಸೂದೆಯ ಪ್ರತಿಯನ್ನು ಹರಿದು ಸದನದಲ್ಲಿ ವಿರೋಧ ವ್ಯಕ್ತಪಡಿಸಿದರು. ಆದರೂ ಗದ್ದಲದ ಮಧ್ಯೆಯೇ ಸರ್ಕಾರ ಮಸೂದೆಗೆ ಸದನದ ಅನುಮೋದನೆ ಪಡೆದುಕೊಂಡಿತು.
ಮಸೂದೆಯಂತೆ, ಧರ್ಮ, ಜಾತಿ, ಸಮುದಾಯ, ಜನಾಂಗ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ನಿವಾಸ, ಅಂಗವೈಕಲ್ಯ ಅಥವಾ ಬುಡಕಟ್ಟು ಆಧಾರದಲ್ಲಿ ವ್ಯಕ್ತಿ ಅಥವಾ ಗುಂಪಿನ ವಿರುದ್ಧ ದ್ವೇಷವನ್ನು ಹರಡುವುದು, ಪ್ರಚೋದಿಸುವುದು ಅಥವಾ ಹಾನಿ ಉಂಟುಮಾಡಿದರೆ, ಮೂರು ವರ್ಷಗಳವರೆಗೆ ಜೈಲುಶಿಕ್ಷೆ ಅಥವಾ ಐದು ಸಾವಿರ ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸುವ ಅಧಿಕಾರ ಕಾನೂನಿಗೆ ಇರುತ್ತದೆ.
ರಾಜ್ಯದಲ್ಲಿ ಕೋಮು ದ್ವೇಷ ಭಾಷಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಮಾಜದಲ್ಲಿ ಅಶಾಂತಿ ತಲೆದೋರಿದೆ. ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಅಗತ್ಯವಿದೆ ಎಂಬ ಸರ್ಕಾರದ ಅಭಿಪ್ರಾಯದಂತೆ ಈ ಮಸೂದೆಯನ್ನು ತರಲಾಗಿದೆ.








