ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಅಸ್ಸಾಂನಲ್ಲಿ ವರುಣ ರೌದ್ರವತಾರ ತಾಳಿದ್ದಾನೆ. ರಣಭೀಕರ ಪ್ರವಾಹದಿಂದ 33 ಜಿಲ್ಲೆಗಳ ಪೈಕಿ 24 ಜಿಲ್ಲೆಗಳು ಸಂಕಷ್ಟದಲ್ಲಿ ಸಿಲುಕಿವೆ. ಪ್ರವಾಹದಿಂದ ಈವರೆಗೆ 84 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ. ಮತ್ತೊಂದು ಕಡೆ 25 ಲಕ್ಷಕ್ಕೂ ಅಧಿಕ ಮಂದಿ ಪ್ರವಾಹದ ಸಂಕಷ್ಟದಲ್ಲಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.
ಪ್ರವಾಹದಿಂದ1,12,138.99 ಹೆಕ್ಟೇರ್ ಬೆಳೆ ಪ್ರದೇಶ ಸಂಪೂರ್ಣ ಹಾನಿಯಾಗಿದೆ. ಸರ್ಕಾರ ಈವರೆಗೆ 521 ಪರಿಹಾರ ಶಿಬಿರಗಳನ್ನು ತೆರೆದಿದೆ. ಅದರಲ್ಲಿ ಪ್ರಸ್ತುತ 50,559 ಮಂದಿಗೆ ಆಶ್ರಯ ನೀಡಲಾಗುತ್ತಿದೆ ಎಂದು ಎಎಸ್ ಡಿಎಂಎ ತಿಳಿಸಿದೆ. ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದಿಂದ 2,400ಕ್ಕೂ ಅಧಿಕ ಮನೆಗಳು ಮನೆಗಳು ಧ್ವಂಸಗೊಂಡಿವೆ.
ಪ್ರವಾಹದಿಂದ ಮೃತಪಟ್ಟ ಕುಟುಂಬಕ್ಕೆ ತಲಾ 4 ಲಕ್ಷ ರೂ.ಪರಿಹಾರ:
ಮೊರಿಗಾಂವ್ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಸರ್ಬಾನಂದ ಸೋನೊವಾಲ್ ಹಾಗೂ ಸಚಿವರಾದ ಕೇಶಬ್ ಮಹಾಂತ ಮತ್ತು ಪಿಜುಶ್ ಹಜಾರಿಕಾ ಭೇಟಿ ನೀಡಿದ್ದಾರೆ. ಸಿಎಂ ಅಲ್ಲಿನ ಪ್ರವಾಹ ಪೀಡಿತ ಪರಿಸ್ಥಿತಿ ಬಗ್ಗೆ ಅಲ್ಲಿನ ಜನರ ಬಳಿಯಿಂದಲೇ ಮಾಹಿತಿ ಪಡೆದಿದ್ದಾರೆ. ಪ್ರವಾಹದಿಂದ ಮೃತಪಟ್ಟ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಪ್ರವಾಹದ ಸುಳಿಗೆ ಸಿಲುಕಿ 108 ಪ್ರಾಣಿಗಳ ಸಾವು..!
ಇನ್ನು ಪ್ರವಾಹದ ಸುಳಿಗೆ ಸಿಲುಕಿ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ 108 ಪ್ರಾಣಿಗಳು ಸಾವನ್ನಪ್ಪಿವೆ. ಇದಲ್ಲದೇ, ಅಪರೂಪದ 8 ಖಡ್ಗ ಮೃಗಗಳು ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಪ್ರವಾಹದಿಂದ ಉದ್ಯಾನವನದಲ್ಲಿ ಶೇ.85 ನೀರು ತುಂಬಿದ್ದು, ಇನ್ನುಳಿದ ಪ್ರಾಣಿಗಳು ಆತಂಕದಲ್ಲಿವೆ.