ದಿಸ್ಪುರ್: ಅಸ್ಸಾಂನಲ್ಲಿ ರಣಭೀಕರ ಪ್ರವಾಹಕ್ಕೆ 93 ಮಂದಿ ಬಲಿಯಾಗಿದ್ದಾರೆ. ಅಸ್ಸಾಂ ಪ್ರವಾಹ ಪರಿಸ್ಥಿತಿ ಗುರುವಾರ ಮತ್ತಷ್ಟು ಹದೆಗೆಟ್ಟಿದ್ದು, ಗುರುವಾರ ಇನ್ನೂ 4 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 26 ಜಿಲ್ಲೆಗಳಲ್ಲಿ 28.32 ಲಕ್ಷ ಮಂದಿ ಪ್ರವಾಹದ ಸಂಕಷ್ಟದಲ್ಲಿದ್ದಾರೆ.
ಅರಣ್ಯ ಇಲಾಖೆ ಮತ್ತು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿದ ಮಾಹಿತಿ ಪ್ರಕಾರ, ಈವರೆಗೆ 123 ಕಾಡು ಪ್ರಾಣಿಗಳು ಸಾವನ್ನಪ್ಪಿವೆ. 430 ಚದರ ಕಿ.ಮೀ ಇರುವ ವಿಶ್ವ ಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಶೇ.92 ಭಾಗ ಮುಳುಗಳಡೆಯಾಗಿದೆ. ಪ್ರವಾಹದಲ್ಲಿ ಅಪರೂಪದ 12 ಖಡ್ಗ ಮೃಗಗಳು ಮೃತಪಟ್ಟಿವೆ. ಸುಮಾರು 14 ಲಕ್ಷ ಸಾಕು ಪ್ರಾಣಿಗಳು ಮತ್ತು 8 ಲಕ್ಷಕ್ಕೂ ಹೆಚ್ಚು ಪಕ್ಷಿಗಳು ಸಂಕಷ್ಟದಲ್ಲಿವೆ ಎಂದು ತಿಳಿಸಿದೆ.
ಎಎಸ್ಡಿಎಂಎ ಅಧಿಕಾರಿಗಳ ಪ್ರಕಾರ, ಪ್ರಸ್ತುತ ಸಂಕಷ್ಟದಲ್ಲಿರುವ 28.32 ಲಕ್ಷ ಜನರಲ್ಲಿ, 17.85 ಲಕ್ಷಕ್ಕೂ ಹೆಚ್ಚು ಜನರು ರಾಜ್ಯದ ಐದು ಪಶ್ಚಿಮ ಜಿಲ್ಲೆಗಳಾದ ಗೋಲ್ಪರಾ (4,69,499), ಬಾರ್ಪೇಟಾ (4,21,522), ಮೊರಿಗಾಂವ್ (3,67,471), ಧುಬ್ರಿ (2,78,041) ಮತ್ತು ದಕ್ಷಿಣ ಸಕ್ಮರಾ (2,49,423) ಜಿಲ್ಲೆಯವರು. ಕೊಕ್ರಜಾರ್, ಕಮ್ರೂಪ್ ,ಬಕ್ಸಾ, ದಕ್ಷಿಣ ಸಲ್ಮಾರಾ, ದಾರಂಗ್, ಸೋನಿತ್ಪುರ, ಬಿಸ್ವಾನಾಥ್, ಟಿನ್ಸುಕಿಯಾ, ಲಖಿಂಪುರ, ಬೊಂಗೈಗಾಂವ್, ಕಮ್ರೂಪ್ನಲ್ಲಿ ಈವರೆಗೆ 93 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. .
2,634 ಗ್ರಾಮಗಳು ಮುಳುಗಡೆ:
ಐದು ಜಿಲ್ಲೆಗಳಲ್ಲಿ ಬ್ರಹ್ಮಪುತ್ರ ನದಿ ಅಪಯಾದ ಮಟ್ಟ ಮೀರಿದ್ದು, ಜನರು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. 26 ಜಿಲ್ಲೆಗಳಲ್ಲಿ 2,634 ಗ್ರಾಮಗಳು ಮುಳುಗಡೆಯಾಗಿವೆ. 1,19,435 ಹೆಕ್ಟೇರ್ ಬೆಳೆ ಪ್ರದೇಶವನ್ನು ಪ್ರವಾಹದ ನೀರು ಮುಳುಗಿಸಿದೆ.
ಜಿಲ್ಲಾಡಳಿತಗಳು 26 ಜಿಲ್ಲೆಗಳಲ್ಲಿ 456 ಪರಿಹಾರ ಶಿಬಿರಗಳು ಮತ್ತು ಆಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಸುಮಾರು 47,215 ಪುರುಷರು, ಮಹಿಳೆಯರು ಮತ್ತು ಮಕ್ಕಳು ಆಶ್ರಯ ಪಡೆಯುತ್ತಿದ್ದಾರೆ. ಅನೇಕ ರಸ್ತೆಗಳು, ಸೇತುವೆಗಳು ಸೇರಿದಂತೆ ಇತರ ಮೂಲಸೌಕರ್ಯಗಳು ಹಾನಿಗೊಳಗಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾಂನ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಜೋಗನ್ ಮೋಹನ್ ಮಾತನಾಡಿ, ಪ್ರವಾಹದಿಂದಾಗಿ ರಾಜ್ಯದ 174 ಸೇತುವೆಗಳನ್ನು ಹಾನಿಯಾಗಿದೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ತಂಡಗಳು ಮತ್ತು ರಾಜ್ಯ ವಿಪತ್ತು ತಂಡಗಳು ಸ್ಥಳೀಯ ಆಡಳಿತದೊಂದಿಗೆ ನಿರಂತರವಾಗಿ ಪ್ರವಾಹ ಪೀಡಿತ ಪ್ರದೇಶದಿಂದ ಜನರನ್ನು ರಕ್ಷಿಸಲು ಮತ್ತು ಪರಿಹಾರ ಸೇವೆಗಳನ್ನು ಒದಗಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.