


ಬಂಟ್ವಾಳ: ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಮೇಲ್ಸೇತುವೆಯ ಕೊನೆಯ ಭಾಗದಲ್ಲಿ ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು ನಾಲ್ವರು ಗಾಯಗೊಂಡ ಘಟನೆ ನಡೆದಿದೆ.
ರಿಕ್ಷಾ ಪ್ರಯಾಣಿಕರಾದ ಅಳಕೆಮಜಲು ನಿವಾಸಿ ಅವ್ವಮ್ಮ ಹಾಗೂ ಸುಹೈಲ್, ರಿಕ್ಷಾ ಚಾಲಕ ನವಾಜ್ ಕಬಕ ಹಾಗೂ ಸ್ಕೂಟರ್ ಸವಾರ ನೇರಳಕಟ್ಟೆ ನಿವಾಸಿ ಸಂಜೀವ ಗಾಯಗೊಂಡವರು. ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗುತ್ತಿದ್ದ ಅವ್ವಮ್ಮ ಅವರಿಗೆ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಇಬ್ಬರು ತುಂಬೆ ಹಾಗೂ ಇನ್ನೋರ್ವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತ ಸಂಭವಿಸಿದ ವೇಳೆ ರಿಕ್ಷಾ ಚಾಲಕನಿಗೆ ನಿಯಂತ್ರಣ ಸಿಗದ ಕಾರಣ ಫ್ಲೈ-ಓವರ್ ನ ತಡೆಗೆ ಡಿಕ್ಕಿಯಾಗಿ ರಿಕ್ಷಾ ಸಂಪೂರ್ಣ ಜಖಂಗೊಂಡಿದೆ. ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿದ್ದ ಮಹಿಳೆಯನ್ನು ಹಿಂದೂ ಸಂಘಟನೆಯ ಪ್ರಮುಖ ಲೋಹಿತ್ ಪಣೋಲಿಬೈಲು ಅವರು ತಮ್ಮ ಕಾರಿನಲ್ಲಿ ತುಂಬೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಘಟನಾ ಸ್ಥಳಕ್ಕೆ ಬಿಸಿರೋಡಿನ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.








