ಸಮಾರಂಭದ ಸರ್ಪಗಾವಲಿಗೆ ಸನ್ನದ್ಧರಾದ 3500 ಪೊಲೀಸರು.!
ಉಗ್ರರ ದಾಳಿಯ ಮುನ್ಸೂಚನೆ ಹಿನ್ನೆಲೆ, ಅಯೋಧ್ಯೆಯಲ್ಲಿ ಕಟ್ಟೆಚ್ಚರ.!
ಅಯೋಧ್ಯೆ: ರಾಮಜನ್ಮಭೂಮಿಯ ಆ.5ರ ಚಾರಿತ್ರಿಕ ಭೂಮಿಪೂಜೆಗೆ ದಿನಗಣನೆ ಆರಂಭವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿ 200 ಗಣ್ಯ ಅತಿಥಿಗಳು ಪಾಲ್ಗೊಳ್ಳುವ ಸಮಾರಂಭಕ್ಕೆ ಬಿಗಿಭದ್ರತೆ ಒದಗಿಸಲು ಉ.ಪ್ರ. ಸರಕಾರ ಕೋವಿಡ್ 19 ನೆಗೆಟಿವ್ ದೃಢಪಟ್ಟ 3500 ಪೊಲೀಸರನ್ನು ನಿಯೋಜಿಸಿದೆ.
ಸರ್ಪಗಾವಲಿಗೆ ಸನ್ನದ್ಧರಾದ 3500 ಪೊಲೀಸರೂ 45ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅಯೋಧ್ಯೆಯ ಭದ್ರತಾ ವ್ಯವಸ್ಥೆಗಳ ಕಾರ್ಯವನ್ನು ಇವರು ನಿರ್ವಹಿಸಲಿದ್ದಾರೆ. ಗುಪ್ತಚರ ಇಲಾಖೆ ಉಗ್ರರ ದಾಳಿಯ ಮುನ್ಸೂಚನೆ ನೀಡಿರುವುದರಿಂದ ಉ.ಪ್ರ. ಸರಕಾರ ಅಯೋಧ್ಯೆಯಲ್ಲಿ ಭಾರೀ ಕಟ್ಟೆಚ್ಚರ ವಹಿಸಿದೆ.
ಬಿಗಿ ಭದ್ರತೆ: ಅಯೋಧ್ಯೆಯಲ್ಲಿ ಅಸ್ತಿತ್ವದಲ್ಲಿರುವ ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆಯ 20 ಕಂಪೆನಿಗಳೂ ಸೇರಿ ಒಟ್ಟು 40 ಕಂಪೆನಿಗಳು ರಕ್ಷಣೆಗೆ ಸಾಥ್ ನೀಡಲಿವೆ. ಎಡಿಜಿ (ಕಾನೂನು ಸುವ್ಯವಸ್ಥೆ) ಪ್ರಶಾಂತ್ ಕುಮಾರ್, ಎಡಿಜಿ ಲಕ್ನೋ ವಲಯ ಸತ್ಯನಾರಾಯಣ್ ಸಬತ್ ಭೂಮಿಪೂಜೆಗೆ ಮುಂಚಿತವಾಗಿ ಪೊಲೀಸ್ ಭದ್ರತಾ ವ್ಯವಸ್ಥೆಯನ್ನು ಮುನ್ನಡೆಸಲಿದ್ದಾರೆ. ಅಯೋಧ್ಯೆ ಎಸ್‌ಎಸ್‌ಪಿ ದೀಪಕ್ ಕುಮಾರ್ ಸೇರಿದಂತೆ 8 ವರಿಷ್ಠಾಧಿಕಾರಿಗಳು, ಇಬ್ಬರು ಡಿಐಜಿ ಮಟ್ಟದ ಅಧಿಕಾರಿಗಳ ತಂಡ ಭದ್ರತೆಯನ್ನು ನಿರ್ವಹಿಸಲಿದೆ.
ಗುಂಪುಗೂಡುವಂತಿಲ್ಲ: ಆ.5ರಂದು ಅಯೋಧ್ಯೆ ನಗರದ ಬೀದಿಗಳಲ್ಲಿ 5 ಜನಕ್ಕಿಂತ ಹೆಚ್ಚು ಮಂದಿ ಗುಂಪು ಗೂಡುವುದನ್ನು ನಿಷೇಧಿಸಲಾಗಿದೆ. ಭೂಮಿಪೂಜೆ ಭದ್ರತೆ ಹಾಗೂ ಕೋವಿಡ್ 19 ಪ್ರೊಟೊಕಾಲ್ ಅನ್ವಯ ಈ ನೀತಿ ಪಾಲಿಸಲು ಕಟ್ಟಾಜ್ಞೆ ಜಾರಿಯಾಗಿದೆ. ‘ಅಯೋಧ್ಯೆಯಲ್ಲಿ ಕೋವಿಡ್ 19 ಸಂಪೂರ್ಣ ನಿಯಂತ್ರಣದಲ್ಲಿದೆ. ಭೂಮಿಪೂಜೆ ದೃಷ್ಟಿಯಿಂದಲೂ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಡಿಸಿ ಅನೂಜ್ ಕುಮಾರ್ ತಿಳಿಸಿದ್ದಾರೆ.