ಉಡುಪಿ: ನನ್ನ ಸಾಮ್ರಾಜ್ಯ ಕುಸಿದಿರಬಹುದು, ಆದರೆ ನಾನು ದಿವಾಳಿಯಾಗಿಲ್ಲ. ನಾನೇನೂ ದೇಶ ಬಿಟ್ಟು ಹೋಗಿಲ್ಲ. ಪೆಟ್ರೋಲ್ ಹಾಕಲು ಹಣವಿಲ್ಲದ ಸ್ಥಿತಿಯಲ್ಲಿ ಉಡುಪಿಯಿಂದ ಸಾಲ ಮಾಡಿ ಅಬುದಾಬಿಗೆ ಹೋಗಿ ಸಾಮ್ರಾಜ್ಯ ಕಟ್ಟಿದವನು ನಾನು, ಮತ್ತೆ ಚೇತರಿಸಿಕೊಳ್ಳುವ ವಿಶ್ವಾಸವಿದೆ. ‘ಶೆಟ್ಟಿ ವಿಲ್ ಕಂ ಬ್ಯಾಕ್’ ಹೀಗಂತ ತೊಡೆ ತಟ್ಟಿದ್ದವರು ಬೇರ್ಯಾರೂ ಅಲ್ಲ, ಅರಬ್ ರಾಷ್ಟ್ರಗಳಲ್ಲಿ ದೊರೆಗಳಿಗೆ ಸರಿಸಾಟಿಯಾಗಿ ಮೆರೆದು, ಬಿದ್ದಲ್ಲೇ ಎದ್ದೇಳಲು ಹವಣಿಸುತ್ತಿರುವ, ಪದ್ಮಶ್ರೀ ಬಿ.ಆರ್.ಶೆಟ್ಟಿ. ಉಡುಪಿಯಲ್ಲಿ ಧಿಡೀರ್ ಪ್ರತ್ಯಕ್ಷವಾದ ಬಿಆರ್ ಶೆಟ್ಟಿ ಮನದಾಳದ ಮಾತು ಹಂಚಿಕೊಂಡಿದ್ದಾರೆ.

ಎನ್ಆರ್ಐ ಉದ್ಯಮಿ ಬಿ.ಆರ್. ಶೆಟ್ಟಿ ಜೀರೋ ದಿಂದ ಹೀರೋ ಆದವರು. ಉಡುಪಿ ಮೂಲದ ಈ ಶ್ರೀಮಂತ ಉದ್ಯಮಿ ದಿವಾಳಿಯಾಗಿದ್ದಾರೆ ಎಂದು ಊರೆಲ್ಲಾ ಸುದ್ದಿಯಾಗಿತ್ತು. ಅಬುದಾಬಿಯಲ್ಲಿರುವ ಎನ್ಎಂಸಿ ಕಂಪೆನಿ ಮುಳುಗಿ ಕೇವಲ ಒಂದು ಡಾಲರ್ ಗೆ ಹರಾಜಾದಾಗ ಶೆಟ್ಟರ ಯುಗ ಮುಗೀತು, ಇನ್ನೇನು ಅವರು ಬೀದಿಗೆ ಬಂದೇ ಬಿಟ್ಟರು ಎಂದು ಭಾವಿಸಲಾಗಿತ್ತು. ಆದರೆ ನಾನು ಸೋತಿರಬಹುದು ಆದರೆ ಸತ್ತಿಲ್ಲ ಅಂತ ಬಿ.ಆರ್. ಶೆಟ್ಟಿ ಗುಟುರು ಹಾಕಿದ್ದಾರೆ. ‘ಶೆಟ್ಟಿ ವಿಲ್ ಕಂ ಬ್ಯಾಕ್’ ಅಂತ ತೊಡೆ ತಟ್ಟಿದ್ದಾರೆ.

ಉಚಿತವಾಗಿ ನಡೆಸುತ್ತಿರುವ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ತನ್ನ ಬಗ್ಗೆ ಜಗತ್ತಿನಾದ್ಯಂತ ಹಬ್ಬಿರುವ ವದಂತಿಗಳಿಗೆ ಬೇಸರ ವ್ಯಕ್ತಪಡಿಸಿ ಭಾವುಕರಾಗಿ ಮಾತನಾಡಿದರು.

ನಾನು ನಂಬಿದವರೇ ನನಗೆ ಮೋಸ ಮಾಡಿದರು ಎಂದು ತಮ್ಮ ಆರ್ಥಿಕ ದಿವಾಳಿತನದ ಸತ್ಯವನ್ನು ಬಿಚ್ಚಿಟ್ಟರು. ನನ್ನ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಸೇರಿದ ಒಬ್ಬನನ್ನು ನಾನು ಸಿ ಎಫ್ ಓ ಮಾಡಿದೆ. ಸಿಇಒ ಮಾಡಿದೆ. ಆದರೆ ಅವನೇ ನನ್ನ ಬೆನ್ನಿಗೆ ಚೂರಿ ಹಾಕಿದ ನನಗೆ ತಿಳಿಯದ ಹಾಗೆ ಬೆನ್ನ ಹಿಂದೆ ಆರ್ಥಿಕ ವಂಚನೆ ಮಾಡಿದ್ದಾರೆ. ಈ ವ್ಯಕ್ತಿಯ ಬಗ್ಗೆ ನಾನು ಏನೂ ಹೇಳುವಂತಿಲ್ಲ. ಯಾಕಂದ್ರೆ ಅವನ ಮೇಲಿನ ಆರೋಪ ಸಾಬೀತಾಗಿಲ್ಲ. ಆದರೆ, ಜನರ ಆಶಿರ್ವಾದದಿಂದ ಈ ಎಲ್ಲಾ ಸಮಸ್ಯೆಗಳಿಂದ ನಾನು ಹೊರ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.









