ನವಜಾತ ಶಿಶುಗಳ ಕಳ್ಳಸಾಗಣೆ ದಂಧೆಯನ್ನು ಭೇದಿಸಿ ಹಲವರನ್ನು ಮುಂಬೈನ ಟ್ರಾಂಬೆ ಪೊಲೀಸರು ಬಂಧಿಸಿದ್ದಾರೆ. ದಂಧೆಯಲ್ಲಿ ಮಗು ಮಾರಾಟ ಮಾಡಲು ಹೊರಟಿದ್ದ ನವಜಾತ ಶಿಶುವಿನ ತಾಯಿ ಸೇರಿದಂತೆ ಆರು ಮಹಿಳೆಯರನ್ನು ಬಂಧಿಸಲಾಗಿದೆ.
ಮುಖ್ಯ ಆರೋಪಿಯನ್ನು ಜೂಲಿಯಾ ಲಾರೆನ್ಸ್ ಫರ್ನಾಂಡಿಸ್ ಎಂದು ಗುರುತಿಸಲಾಗಿದೆ.
ಆಕೆ ವರ್ಲಿಯ ಮಹಾತ್ಮ ಫುಲೆ ನಗರದಲ್ಲಿ ‘ಅಹಮ್ ಫೌಂಡೇಶನ್’ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾಳೆ. ಇವಳೊಂದಿಗೆ ಗೈರೋಬಿ ಉಸ್ಮಾನ್ ಶೇಖ್, ಗುಲ್ಭಾಷಾ ಮತೀನ್ ಶೇಖ್, ಸೈರಾಬಾನು ಶೇಖ್ ಮತ್ತು ರೀನಾ ನಿತಿನ್ ಚವಾಣ್ ಎಂಬ ಜೂಲಿಯಾ ಲಾರೆನ್ಸ್ ಫರ್ನಾಂಡಿಸ್ ಳ ಸಹಚರರನ್ನು ಬಂಧಿಸಲಾಗಿದೆ. ಫರ್ನಾಂಡಿಸ್ ವಿರುದ್ಧ 2017 ರಲ್ಲಿ ಇದೇ ರೀತಿಯ ಅಪರಾಧಗಳಲ್ಲಿ ಹಲವು ಬಾರಿ ದೂರು ದಾಖಲಾಗಿದೆ.
ಶಿಶು ಕಳ್ಳಸಾಗಣೆ ಬಗ್ಗೆ ಪೊಲೀಸರಿಗೆ ಸ್ಪಷ್ಟ ಸುಳಿವು ದೊರೆತ ನಂತರ ಈ ದಂಧೆ ಪೊಲೀಸರ ಬಲೆಗೆ ಬಿದ್ದಿದೆ. ಅಪರಾಧಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಪೊಲೀಸರು ಯಾವುದೇ ವೈದ್ಯಕೀಯ ಪರಿಣತಿ ಅಥವಾ ಪ್ರಮಾಣಪತ್ರವಿಲ್ಲದೆ ಗೋವಂಡಿಯ ರಫೀಕ್ ನಗರದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಸೈರಾಬಾನು ಅವರನ್ನು ಸಂಪರ್ಕಿಸಿದರು. ಮಗುವನ್ನು ಪಡೆಯಲು ಬಯಸುವ ಪೋಷಕರಂತೆ ವರ್ತಿಸಿದ ಇವರಿಗೆ ಆರೋಪಿಗಳು ಹೆಣ್ಣು ಮಗು ನೀಡಲು 5 ಲಕ್ಷ ರೂ. ನೀಡಬೇಕಾಗುತ್ತದೆ, ಗಂಡುಮಗು ಬೇಕಾದರೆ ಅದಕ್ಕಿಂತ ಹೆಚ್ಚು ಹಣ ನೀಡಬೇಕಾಗುತ್ತದೆ ಎಂದಿದ್ದರು.
ಸೈರಾಬಾನು ಅವರ ಕ್ಲಿನಿಕ್ ದಂಧೆಯ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು. ಫರ್ನಾಂಡಿಸ್ ಸೈರಾಬಾನು ಜೊತೆ ನಂಟು ಹೊಂದಿದ್ದು ಗರ್ಭಿಣಿಯರನ್ನು ಹೆರಿಗೆ ಮಾಡಿಸಲು ಕಳುಹಿಸುತ್ತಿದ್ದರು. ಇಲ್ಲಿಂದ ಅವರು ಕಳ್ಳಸಾಗಣೆ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದರು. ರೀನಾ, ಗ್ರಾಹಕರು ಮತ್ತು ಫರ್ನಾಂಡಿಸ್ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಸೈರಾಬಾನು ಹಲವಾರು ಅಕ್ರಮ ಗರ್ಭಪಾತಗಳನ್ನು ಮಾಡುವುದರ ಜೊತೆಗೆ ಸಾಮಾನ್ಯ ಹೆರಿಗೆ ಮಾಡಿಸಿರುವುದಾಗಿ ಕನಿಷ್ಠ 100 ಜನನ ಪ್ರಮಾಣಪತ್ರಗಳನ್ನು ನೀಡಿದ್ದು ತನಿಖೆಯಿಂದ ತಿಳಿದುಬಂದಿದೆ. ಈ ಕ್ಲಿನಿಕ್ ನ ಇದೀಗ ಕಪ್ಪುಪಟ್ಟಿಗೆ ಸೇರಿಸಲಾಗಿದೆ.
ಗರ್ಭಪಾತ ಮಾಡಿಸುವಂತೆ ಬರ್ತಿದ್ದ ಮಹಿಳೆಯರನ್ನು ಮಗುವಿಗೆ ಜನ್ಮ ನೀಡುವುಂತೆ ಜೂಲಿಯಾ ಲಾರೆನ್ಸ್ ಫರ್ನಾಂಡಿಸ್ ಮನವೊಲಿಸುತ್ತಿದ್ದಳು. ಹೆರಿಗೆಯ ವೆಚ್ಚವನ್ನೆಲ್ಲಾ ಆಕೆಯೇ ನೋಡಿಕೊಂಡು ಜನನವಾದ ಮಗುವನ್ನ ವಶಕ್ಕೆ ಪಡೆದು ಕಳ್ಳಸಾಗಣೆ ಮಾಡುತ್ತಿದ್ದಳು.
ತನ್ನ ಮಗುವನ್ನು ಮಾರಾಟ ಮಾಡಲು ಆರೋಪಿಗೆ ನೀಡಿದ್ದ ಶಬಾನಾ ಶೇಖ್ ಎಂಬಾಕೆಯನ್ನೂ ಪೊಲೀಸರು ಬಂಧಿಸಿದ್ದಾರೆ. ಪತಿ ತನ್ನನ್ನು ತೊರೆದು ಹೋಗಿರುವ ಕಾರಣ ಹಾಗೂ ತಾನು ನಿರುದ್ಯೋಗಿಯಾಗಿರುವ ಕಾರಣ ಈ ಕೃತ್ಯ ಎಸಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಜೀವನೋಪಾಯಕ್ಕಾಗಿ ಮಗುವನ್ನು ಮಾರಾಟ ಮಾಡುವುದೇ ತನಗಿದ್ದ ಏಕೈಕ ಮಾರ್ಗವಾಗಿತ್ತೆಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.