



ಬಂಟ್ವಾಳ: ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಕಟ್ಟೆಮನೆ ಪ್ರದೇಶದಲ್ಲಿ ಡಿ.29ರಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೋರ್ವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ವರದಿಯಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಪ್ರಸನ್ನ ಎಂಬವರು ಚಲಾಯಿಸುತ್ತಿದ್ದ KA-20-Z-6105 ನೋಂದಣಿಯ ನ್ಯಾನೋ ಕಾರು ಹಾಗೂ ಇಮ್ರಾನ್ @ ಎಸ್.ಎ. ಮೊಹಮ್ಮದ್ ತಾಹ ಎಂಬವರು ಚಲಾಯಿಸುತ್ತಿದ್ದ KA-19-HN-3709 ನೋಂದಣಿಯ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಬೈಕ್ ಸವಾರ ಇಮ್ರಾನ್ ಅವರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 88/2025ರಂತೆ, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 281 ಹಾಗೂ 106(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಘಟನೆ ಬಳಿಕ ಕಾರು ಚಾಲನೆ ಮಾಡುತ್ತಿದ್ದ ಆರೋಪಿತ ಪ್ರಸನ್ನ ಅವರು ದಕ್ಷಿಣ ಕನ್ನಡ ಜಿಲ್ಲಾ ಡಿ.ಸಿ.ಆರ್.ಇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಅಲ್ಲದೆ, ಅಪಘಾತದ ವೇಳೆ ಆರೋಪಿತನು ಮದ್ಯಪಾನ ಮಾಡಿಕೊಂಡಿದ್ದಾನೆ ಎಂಬ ಆರೋಪದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವ್ಯಾಪಕವಾಗಿ ಹರಿದಾಡಿದ್ದು, ಈ ವಿಷಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಈ ಹಿನ್ನೆಲೆ ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಉಪನಿರೀಕ್ಷಕರು ಆರೋಪಿತನ ಮೇಲೆ ಆಲ್ಕೋಮೀಟರ್ ಪರೀಕ್ಷೆ ನಡೆಸಿದ್ದು, ಆ ಪರೀಕ್ಷೆಯಲ್ಲಿ ಆತ ಮದ್ಯಪಾನ ಮಾಡಿರುವುದು ದೃಢಪಟ್ಟಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮೃತನ ಸಂಬಂಧಿಕರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ/ಆಡಿಯೋ ಪ್ರಸಾರ ಮಾಡಿದ ಮಹಿಳೆಯ ಸಮ್ಮುಖದಲ್ಲಿಯೇ ಈ ಆಲ್ಕೋಮೀಟರ್ ಪರೀಕ್ಷೆ ನಡೆಸಲಾಗಿದ್ದು, ಆ ಸಂದರ್ಭದಲ್ಲಿಯೂ ಮದ್ಯಪಾನ ಮಾಡಿರುವುದು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದರೂ, ಆರೋಪಿತನು ಮದ್ಯಪಾನ ಮಾಡಿಕೊಂಡಿದ್ದಾನೆಯೇ ಎಂಬ ಬಗ್ಗೆ ಹೆಚ್ಚಿನ ಖಚಿತತೆಗಾಗಿ ಮುಂದಿನ ಹಂತವಾಗಿ ರಕ್ತಪರೀಕ್ಷೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ರಕ್ತಪರೀಕ್ಷೆಯ ವರದಿ ಲಭ್ಯವಾದ ಬಳಿಕ, ಅದರ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುಂಜಾಲಕಟ್ಟೆ ಪೊಲೀಸರು ಹೇಳಿದ್ದಾರೆ.
ಘಟನೆಯ ಸಂಪೂರ್ಣ ಹಿನ್ನೆಲೆ, ಅಪಘಾತಕ್ಕೆ ಕಾರಣಗಳು ಹಾಗೂ ಇತರೆ ಅಂಶಗಳ ಕುರಿತು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.








