8ಲಕ್ಷ 42ಸಾವಿರ ರೂಪಾಯಿ ಮೌಲ್ಯದ ಸೊತ್ತು ಸ್ವಾಧೀನ





ಬಜಪೆ: ಮಾರ್ಚ್ 18ರಂದು ಬೆಳಗ್ಗೆ 4:45ರ ಸುಮಾರಿಗೆ ಬಜಪೆ ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ಸಸ್ತಾವು ಪ್ರದೇಶದಲ್ಲಿ ದನಗಳನ್ನು ಕ್ರೂರವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.
ಬಾತ್ಮಿದಾರರಿಂದ ಬಂದ ಮಾಹಿತಿಯಂತೆ, ಫಾರ್ಚೂನರ್ ಕಾರಿನಲ್ಲಿ ದನಗಳ ಕಾಲುಗಳನ್ನು ಕಟ್ಟಿ ಹಿಂಸಾತ್ಮಕವಾಗಿ ತುಂಬಿಕೊಂಡು ಮಾರಾಟಕ್ಕಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎ.ಸಿ.ಪಿ ಶ್ರೀಕಾಂತ್ ಮತ್ತು ಪಿ.ಐ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಬಜಪೆ ಠಾಣೆಯ ಪಿ.ಎಸ್.ಐ ಶ್ರೀಮತಿ ಲತಾ ಹಾಗೂ ಸಿಬ್ಬಂದಿಗಳಾದ ರಾಜೇಶ್, ಚಿದಾನಂದ ಮತ್ತು ಪ್ರಕಾಶ್ ದಾಳಿ ನಡೆಸಿದರು.
ದಾಳಿಯ ವೇಳೆ ಆರೋಪಿಗಳು ಕಾರು ಹಾಗೂ ಮಾಲುಗಳನ್ನು ಬಿಟ್ಟು ಪರಾರಿಯಾಗಿದ್ದು, ಪೊಲೀಸರು 4 ದನಗಳು, ಒಂದು ಫಾರ್ಚೂನರ್ ಕಾರು, ಒಂದು ತಲವಾರ್ ಮತ್ತು ಒಂದು ಕಬ್ಬಿಣದ ರಾಡ್ ಅನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ಸುಮಾರು ₹8.42 ಲಕ್ಷ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 63/2026 ಪ್ರಕರಣ ದಾಖಲಾಗಿ, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಕಲಂ 4, 5, 12, ಪ್ರಿವೆನ್ಷನ್ ಆಫ್ ಕ್ರೂರತೆ ಟು ಅನಿಮಲ್ಸ್ ಆಕ್ಟ್ 1960ರ ಕಲಂ 11(A), 11(D), ಮೋಟಾರ್ ವಾಹನ ಕಾಯ್ದೆ 1988ರ ಕಲಂ 192(A) ಹಾಗೂ ಆರ್ಮ್ಸ್ ಆಕ್ಟ್ 1959ರ ಕಲಂ 4, 25(1B) ಅಡಿಯಲ್ಲಿ ತನಿಖೆ ಮುಂದುವರಿದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಿಸಾರ್ @ ನಿಸಾರುದ್ದೀನ್ (28) ಹಾಗೂ ಮೊಹಮ್ಮದ್ ಜಮಾಲುದ್ದೀನ್ @ ಜಮಾಲ್ (24) ಅವರನ್ನು ಮಾರ್ಚ್ 19ರಂದು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನೂ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಪೋಲಿಸ್ ಪ್ರಕಟನೆಯಲ್ಲಿ ತಿಳಿದು ಬಂದಿದೆ.








