


ಬೆಂಗಳೂರು: ಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸಾವಿಗೀಡಾದ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಲ್ಲ ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡು ರಾಜ್ಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಈಗಾಗಲೇ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಸಿಐಡಿ ತನಿಖೆಗೆ ಆದೇಶ ಹೊರಬಿದ್ದಿದೆ.
ಈ ಹಿಂದೆ ಮಾತನಾಡಿದ್ದ ಗೃಹ ಸಚಿವರು, ಘಟನೆಯಲ್ಲಿ ಪೊಲೀಸರ ಗನ್ ಅಥವಾ ರಿವಾಲ್ವರ್‌ನಿಂದ ಫೈರಿಂಗ್ ನಡೆದಿಲ್ಲ, ಖಾಸಗಿ ಗನ್‌ನಿಂದ ಗುಂಡು ಹಾರಿಸಿರುವ ಸಾಧ್ಯತೆ ಇದೆ ಎಂದು ಎಡಿಜಿಪಿ ಮಾಹಿತಿ ನೀಡಿರುವುದಾಗಿ ಸ್ಪಷ್ಟಪಡಿಸಿದ್ದರು. ಪೆಟ್ರೋಲ್ ಬಾಂಬ್ ಬಳಕೆ ಆರೋಪವೂ ಕೇಳಿಬಂದಿದ್ದು, ತನಿಖೆಯ ನಂತರ ಸತ್ಯಾಂಶ ತಿಳಿಯಲಿದೆ ಎಂದಿದ್ದರು.
ಇತ್ತ, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವಿಗೆ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿಯೇ ನೇರ ಕಾರಣ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಇಬ್ಬರನ್ನೂ ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಜಶೇಖರ್ ಅವರ ಅಂತ್ಯಕ್ರಿಯೆ ವೇಳೆ ಸಾಕ್ಷ್ಯ ನಾಶದ ಪ್ರಯತ್ನ ನಡೆದಿದೆ ಎಂಬ ಆರೋಪವನ್ನೂ ಜನಾರ್ದನ ರೆಡ್ಡಿ ಮುಂದಿಟ್ಟಿದ್ದಾರೆ. ಶವವನ್ನು ಮೊದಲು ಗುಂಡಿ ತೋಡಿ ನಂತರ ಸುಟ್ಟಿದ್ದು, ಕಟ್ಟಿಗೆಯ ಬದಲು ಗ್ಯಾಸ್ ಬಳಸಿ ದಹನ ಮಾಡಲಾಗಿದೆ ಎಂದು ಅವರು ದೂರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸ್ಮಶಾನದಲ್ಲಿ ಗುಂಡಿ ತೋಡುವ ಕೆಲಸ ಮಾಡಿದ ಸೋಮ ಎಂಬ ವ್ಯಕ್ತಿಯ ವಿಡಿಯೋ ಹೇಳಿಕೆಯನ್ನು ಅವರು ಬಿಡುಗಡೆ ಮಾಡಿದ್ದಾರೆ.
ಶಾಸಕ ಭರತ್ ರೆಡ್ಡಿ ಸೂಚನೆಯಂತೆ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂಬ ಆರೋಪವೂ ವಿಡಿಯೋ ಸಾಕ್ಷ್ಯದಲ್ಲಿ ಉಲ್ಲೇಖವಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಬಳ್ಳಾರಿಯಲ್ಲಿ ರಾಜಕೀಯ ತೀವ್ರಗೊಂಡಿದ್ದು, ಬಿಜೆಪಿ ಇದೇ 17ರಂದು ಬೃಹತ್ ಸಮಾವೇಶ ನಡೆಸಲು ತಯಾರಿ ನಡೆಸುತ್ತಿದೆ.








