




ವಿಟ್ಲ: ಬಾಲಗೋಕುಲ ಸಮಿತಿ ವಿಟ್ಲ ಇದರ ಆಶ್ರಯದಲ್ಲಿ 19ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಿತು.
ವಿಟ್ಲ ಕೆಎಸ್ ಆರ್ ಟಿಸಿ ಬಸ್ಸು ನಿಲ್ದಾಣದಿಂದ ಹೊರಟ ಭವ್ಯ ಶೋಭಾಯಾತ್ರೆಯನ್ನು ವಿಟ್ಲದ ಸ್ವರ್ಣೋದ್ಯಮಿ ಪುರಂದರ ಆಚಾರ್ಯ ಉದ್ಘಾಟಿಸಿದರು.
ವಿವಿಧ ಮುಖವಾಡಗಳ ಗೊಂಬೆ ಬಳಗ ಕುಣಿತ, ಕುಣಿತ ಭಜನಾ ತಂಡಗಳು ಕುಣಿತ ಭಜನೆ, ಮುದ್ದುಕೃಷ್ಣ ವೇಷಧಾರಿ ಪುಟಾಣಿಗಳು, ಯಶೋದೆ ವೇಷಧಾರಿಗಳು ಶೋಭಾಯಾತ್ರೆಗೆ ಮೆರುಗು ನೀಡಿದವು.


ಮೆರವಣಿಗೆಯ ಬಳಿಕ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಮೂರುಕಜೆ ಅಜೇಯ ಟ್ರಸ್ಟ್ ಕಾರ್ಯದರ್ಶಿ ರೂಪಲೇಖ ಅಧ್ಯಕ್ಷತೆ ವಹಿಸಿ ಮಾತನಾಡಿ ಬಾಲಗೋಕುಲ ಸಮಿತಿಯ ಮೂಲಕ ಮಕ್ಕಳಲ್ಲಿ ಧಾರ್ಮಿಕತೆ ಮೊಳೆಯುತ್ತದೆ. ಭಾರತದ ಪುಣ್ಯಭೂಮಿ ಜಗತ್ತಿಗೆ ದೇವರಕೋಣೆಯಂತಿದ್ದು, ನಮಗೆಲ್ಲರಿಗೂ ದೇಶದ ಋಣ ಸಂದಾಯದ ಜವಾಬ್ದಾರಿಯಿದೆ. ಹಿಂದು ಸಮಾಜ ಬಾಂಧವರು ಸಂಘಟಿತರಾಗಿ ಮುನ್ನಡೆಯುವ ಕಾಲ ಸನ್ನಿಹಿತವಾಗಿದೆ ಎಂದರು.
ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ಯಕ್ಷಧ್ರುವ ಯಕ್ಷ ಶಿಕ್ಷಣ ಪಟ್ಲ ಫೌಂಡೇಶನ್ ಸಹ ಸಂಚಾಲಕಿ ಸಾಯಿಸುಮಾ ಎಂ.ನಾವಡ ಮಾತನಾಡಿ ಕೃಷ್ಣ ಜನ್ಮಾಷ್ಟಮಿಯಂದು ಮಾತ್ರ ಕೃಷ್ಣನ ನೆನಪು ಮಾಡಿಕೊಂಡರೆ ಸಾಲದು. ಆಚರಣೆಗಳು ಅರ್ಥಹೀನವಾಗುತ್ತಿವೆ. ಧರ್ಮ ರಕ್ಷಣೆಗಾಗಿ ಅವತರಿಸಿದ ಕೃಷ್ಣ ಉಪದೇಶಿಸಿದ ಭಗವದ್ಗೀತೆ ಸಂದೇಶ ಎಲ್ಲಿ ತನಕ ಪಾಲನೆಯಾಗುತ್ತದೆಯೋ ಅಲ್ಲಿ ತನಕ ಜಗತ್ತು ಉಳಿದು ಬೆಳೆಯುತ್ತದೆ. ಜೀವನದಲ್ಲಿ ಮಾಡುವ ತಪ್ಪುಗಳಿಗೂ ಮಿತಿಯಿರಬೇಕು ಎಂದು ತಿಳಿಸಿದರು.


ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟಕೃಷ್ಣ ಶರ್ಮ ಸಮಾರಂಭವನ್ನು ಉದ್ಘಾಟಿಸಿದರು.
ವಿಟ್ಲ ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿಯಮಿತದ ಅಧ್ಯಕ್ಷ ಕೆ.ಮೋನಪ್ಪ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಬಾಲಗೋಕುಲ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಕೂಡೂರು, ಗೌರವಾಧ್ಯಕ್ಷ ಹರೀಶ್ ಸಿ.ಹೆಚ್, ಉದ್ಯಮಿ ಸತೀಶ್ ಕಲ್ಲೇಗ ಉಪಸ್ಥಿತರಿದ್ದರು.
ವಿಠಲ ಪದವಿಪೂರ್ವ ಕಾಲೇಜಿನ ಸಿಬ್ಬಂದಿ ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.
ವೇದಘೋಷದೊಂದಿಗೆ ಸಭೆಗೆ ಚಾಲನೆ ನೀಡಲಾಯಿತು. ಹಂಸಿನಿ ಅನ್ನಮೂಲೆ ಪ್ರಾರ್ಥನೆ ಹಾಡಿದರು. ಬಾಲಗೋಕುಲ ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಲ್ಲಕಟ್ಟ ಸ್ವಾಗತಿಸಿದರು. ಕೋಶಾಧಿಕಾರಿ ಶಿಶಿರ್ ಅನಿಲಕಟ್ಟೆ ವಂದಿಸಿದರು.ರಾಧಾಕೃಷ್ಣ ಎರುಂಬು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಪರಮೇಶ್ವರ ಆಚಾರ್ಯ ಪ್ರಸ್ತಾವಿಸಿದರು.
ಸಭೆಯ ಬಳಿಕ ಬಾಲ ಗೋಕುಲ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಕ್ಷಿತ್ ಶೆಟ್ಟಿ ಪಡ್ರೆ ನಿರ್ದೇಶನದಲ್ಲಿ ಆರ್. ಕೆ. ಯಕ್ಷಗಾನ ಕಲಾಕೇಂದ್ರ ವಿಟ್ಲದ ವಿದ್ಯಾರ್ಥಿಗಳಿಂದ ‘ಲೀಲಾ ಮಾನುಷ ವಿಗ್ರಹ’ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.








