



ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳು ಸೆಲ್ಫಿ, ರೀಲ್ಸ್, ವಿಡಿಯೋ ಚಿತ್ರೀಕರಣ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಶೈಕ್ಷಣಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಇಲಾಖೆ 12 ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ಪದವಿ ಕಾಲೇಜುಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು. ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮದ ಎಚ್ಚರಿಕೆಯನ್ನೂ ನೀಡಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿಯಮ ಜಾರಿ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ನೂತನ ಮಾರ್ಗಸೂಚಿಗಳನ್ನು ತಕ್ಷಣದಿಂದಲೇ ಪಾಲಿಸುವಂತೆ ಇಲಾಖೆ ಸೂಚಿಸಿದೆ. ಇಲಾಖೆಯ ಪೂರ್ವಾನುಮತಿ ಇಲ್ಲದೆ ಶೈಕ್ಷಣಿಕ ಪ್ರವಾಸ ಕೈಗೊಳ್ಳುವಂತಿಲ್ಲ. ಪ್ರವಾಸಕ್ಕೂ ಮುನ್ನ ವಿದ್ಯಾರ್ಥಿಗಳ ಮುಚ್ಚಳಿಕೆ ಪತ್ರ ಮತ್ತು ಪೋಷಕರ ಅನುಮತಿ ಪತ್ರದೊಂದಿಗೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಬೇಕು. ಅನುಮತಿ ನೀಡಿರುವ ಸ್ಥಳಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳ ವೀಕ್ಷಣೆಗೆ ಅವಕಾಶವಿಲ್ಲ.ವಿದ್ಯಾರ್ಥಿನಿಯರ ಸುರಕ್ಷತೆಗೆ ಅಗತ್ಯ ಕ್ರಮ ಕಡ್ಡಾಯ. ಅನಾನುಕೂಲ ಅಥವಾ ಅವಘಡ ಸಂಭವಿಸಿದರೆ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಂಶುಪಾಲರೇ ನೇರ ಹೊಣೆ.
ವಿದ್ಯಾರ್ಥಿಗಳೊಂದಿಗೆ ಕನಿಷ್ಠ ಒಬ್ಬ ಖಾಯಂ ಉಪನ್ಯಾಸಕರು ತೆರಳಬೇಕು. ಕೇವಲ ಅತಿಥಿ ಉಪನ್ಯಾಸಕರ ನೇತೃತ್ವದಲ್ಲಿ ಪ್ರವಾಸಕ್ಕೆ ಕಳುಹಿಸುವಂತಿಲ್ಲ. ಪ್ರವಾಸಕ್ಕೆ ತೆರಳುವ ಅಧ್ಯಾಪಕರ ಸಂಖ್ಯೆ 4 ಮೀರಬಾರದು. ಇಬ್ಬರು ಮಹಿಳಾ ಅಧ್ಯಾಪಕಿಯರು ಮತ್ತು ಒಬ್ಬರು ಗ್ರೂಪ್ ‘ಡಿ’ ನೌಕರರು ಕಡ್ಡಾಯ.ಪ್ರವಾಸದ ಅವಧಿ ಪ್ರಯಾಣ ಸೇರಿ ಗರಿಷ್ಠ 5 ದಿನ ಮೀರಬಾರದು.ಮಳೆಗಾಲದಲ್ಲಿ ಪ್ರವಾಸಕ್ಕೆ ಅನುಮತಿ ಇಲ್ಲ. ನದಿ, ಸಮುದ್ರ, ದಟ್ಟ ಅರಣ್ಯ, ಕಡಿದಾದ ಬೆಟ್ಟದ ಪ್ರದೇಶಗಳಿಗೆ ತೆರಳುವ ಮುನ್ನ ಸುರಕ್ಷತಾ ಕ್ರಮ ಕಡ್ಡಾಯ. ನುರಿತ ಚಾರಣಿಗರು/ ಈಜುಗಾರರು ಇದ್ದರೆ ಮಾತ್ರ ಸ್ಥಳೀಯರ ಮಾಹಿತಿ ಪಡೆದು ಅವಕಾಶ ನೀಡಬೇಕು.
ಪ್ರವಾಸದ ವೇಳೆ ಸೆಲ್ಫಿ/ರೀಲ್ಸ್ ಚಿತ್ರೀಕರಣಕ್ಕೆ ಅವಕಾಶವಿಲ್ಲ ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಮೊದಲೇ ನೀಡಬೇಕು ಮತ್ತು ಅಧ್ಯಾಪಕರು ನಿಗಾ ವಹಿಸಬೇಕು. ಪ್ರವಾಸ ಹೊರಡುವ ಮುನ್ನ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಕಡ್ಡಾಯ. ರಜೆ ಪಡೆದು ಅಥವಾ ಬೇರೆ ವಿಧಾನದಲ್ಲಿ ಪ್ರಾಧ್ಯಾಪಕರು/ಸಿಬ್ಬಂದಿ/ಅತಿಥಿ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುವಂತಿಲ್ಲ. ಹಾಗೆ ತೆರಳಿದರೆ ಪ್ರಾಂಶುಪಾಲರು ಮತ್ತು ಸಂಬಂಧಿಸಿದ ಸಿಬ್ಬಂದಿಯೇ ನೇರ ಹೊಣೆ, ಇಲಾಖೆ ಹೊಣೆಯಲ್ಲ.
ಇಲಾಖೆ ಅನುಮತಿ ಪಡೆದು ತೆರಳುವಾಗ ಸಂಬಂಧಪಟ್ಟ ವಿಭಾಗದ ಪ್ರಾಧ್ಯಾಪಕರನ್ನು ಹೊರತುಪಡಿಸಿ ಬೇರೆ ವಿಭಾಗದವರು ಅನುಮತಿ ಇಲ್ಲದೆ ತೆರಳುವಂತಿಲ್ಲ. ನಿಯಮ ಮೀರಿ ಅಹಿತಕರ ಘಟನೆ ಸಂಭವಿಸಿದರೆ ಕಾಲೇಜಿನ ಅಧಿಕಾರಿ/ಸಿಬ್ಬಂದಿಗಳೇ ನೇರ ಹೊಣೆಗಾರರು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.








