ಬೆಂಗಳೂರು: ಸಾಂಖ್ಯಿಕ ಇಲಾಖೆಯ ಜಿಲ್ಲಾ ಕಚೇರಿಯ ಶೌಚಾಲಯದಲ್ಲಿ ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹನುಮಂತರಾಯ (41) ಹಾಗೂ ಅವರ ಪತ್ನಿ ಹೊನ್ನಮ್ಮ (34) ಕೊಲೆಯಾದವರು. ಗುರುವಾರ ಬೆಳಿಗ್ಗೆ ಅವರಿಬ್ಬರನ್ನು ಕೊಲೆ ಮಾಡಲಾಗಿದ್ದು, ಶೌಚಾಲಯದಲ್ಲಿ ಮೃತದೇಹಗಳು ಇದ್ದವು. ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪೀಣ್ಯ ಬಳಿಯ ಕರಿಹೋಬನಹಳ್ಳಿಯಲ್ಲಿ ಸಾಂಖ್ಯಿಕ ಇಲಾಖೆಯ ಜಿಲ್ಲಾ ಕಚೇರಿಯಿದ್ದು, ಅಲ್ಲಿ ಹನುಮಂತರಾಯ ಸೆಕ್ಯುರಿಟಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಹೊನ್ನಮ್ಮ ಅದೇ ಕಚೇರಿಯ ಸ್ವಚ್ಛತೆ ಸಿಬ್ಬಂದಿಯಾಗಿದ್ದರು.

‘ಗುರುವಾರ ಬೆಳಿಗ್ಗೆ ಅವರಿಬ್ಬರು ಕಚೇರಿಗೆ ಬಂದಿದ್ದರು. ಅದೇ ಸಂದರ್ಭದಲ್ಲೇ ದುಷ್ಕರ್ಮಿಗಳು, ಇಬ್ಬರನ್ನೂ ಕೊಂದು ಶೌಚಾಲಯದಲ್ಲಿ ಮೃತದೇಹವಿಟ್ಟು ಪರಾರಿಯಾಗಿರುವ ಅನುಮಾನವಿದೆ’ ಎಂದೂ ಪೊಲೀಸರು ತಿಳಿಸಿದರು.

ಮಗನೇ ಕೊಲೆ ಮಾಡಿರುವ ಶಂಕೆ ಇದ್ದು ಆತ ಸದ್ಯ ತಲೆಮರೆಸಿಕೊಂಡಿದ್ದಾನೆ. ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದೂ ಅವರು ವಿವರಿಸಿದರು.

