ಬೆಂಗಳೂರು: ಕೇರಳದ ಇಬ್ಬರು ಶಂಕಿತ ವ್ಯಕ್ತಿಗಳನ್ನು ಬೆಂಗಳೂರಿನ ಸುದ್ದಗುಂಟೆ ಠಾಣೆ ಪೊಲೀಸರು ಬಂಧಿಸಿ, 27,17,670 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಸೂಕ್ತ ದಾಖಲೆಗಳಿಲ್ಲದ ಹಿನ್ನೆಲೆಯಲ್ಲಿ ಈ ಹಣವನ್ನು ಹವಾಲಾ ಹಣ ಇರಬಹುದೆಂದು ಶಂಕಿಸಿರುವ ಪೊಲೀಸರು, ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೇರಳದ ಕೋಜಿಕೋಡ್ ಜಿಲ್ಲೆಯ ಮಹಮ್ಮದ್ ನಿಹಾಲ್ (21), ಅನ್ವರ್ ಕೆ.ಕೆ. (25) ಬಂಧಿತ ಆರೋಪಿಗಳು. ಈ ಹಣವನ್ನು ಆರೋಪಿಗಳು ಕಳವು ಮಾಡಿಕೊಂಡು ಬಂದಿರಬಹುದೇ ಅಥವಾ ಹವಾಲಾ ಹಣ ಇರಬಹುದೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.

ಸುದ್ದಗುಂಟೆ ಠಾಣೆ ವ್ಯಾಪ್ತಿಯ ತಾವರೆಕೆರೆ ಮುಖ್ಯರಸ್ತೆ, ಎಸ್‍ಬಿಐ ಎಟಿಎಂ ಮುಂಭಾಗ ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದ ಈ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ಅವರಿಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ತಕ್ಷಣ ಅವರನ್ನು ಹಿಡಿದು ಪರಿಶೀಲಿಸಿದಾಗ ಅವರ ಬಳಿ 27,17,670 ಹಣ ಪತ್ತೆಯಾಗಿದೆ. ಆ ಹಣದ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಯಾವುದೇ ದಾಖಲಾತಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.










