




ಬೆಂಗಳೂರು: ಕನ್ನಡದ ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಕಾರುಣ್ಯಾ ರಾಮ್, ತನ್ನ ಸ್ವಂತ ತಂಗಿ ಸಮೃದ್ಧಿ ರಾಮ್ ವಿರುದ್ಧವೇ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸಮೃದ್ಧಿ ರಾಮ್ ಮಾತ್ರವಲ್ಲದೆ ಪ್ರತಿಭಾ, ಪುಜ್ವಲ್, ರಕ್ಷಿತ್, ಸಾಗರ್, ಕಪಿಲ್ ಎಂಬವರ ವಿರುದ್ಧ ಕಾರುಣ್ಯ ರಾಮ್ ಸಿಸಿಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮೇಕಪ್ ಆರ್ಟಿಸ್ಟ್ ಸಮೃದ್ಧಿ ರಾಮ್ ಬೆಟ್ಟಿಂಗ್ ಆಡಿ ಸುಮಾರು 25 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾರೆ. ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದಾರೆ. ಹೀಗಾಗಿ ಮನೆಯಲ್ಲಿದ್ದ ಚಿನ್ನ ಹಾಗೂ ಹಣವನ್ನು ಸಾಲ ತೀರಿಸಲು ಬಳಸಿಕೊಂಡು ವಂಚಿಸಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.
ಆಕೆ ಮಾಡಿರುವ ಸಾಲದ ಹಣ ಪಡೆಯಲು ಸಾಲಗಾರರು ಮನೆಗೆ ಬಂದು ಪೀಡಿಸುತ್ತಿದ್ದಾರೆ. ನನ್ನ ಹಣವನ್ನು ಬಳಕೆ ಮಾಡಿಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ಸಮೃದ್ಧಿ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶ, ಸಾಮಾಜಿಕ ಜಾಲತಾಣದಲ್ಲಿ ಹಾಕುವ ಫೋಟೋಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿ ನಿಂದಿಸುತ್ತಿದ್ದಾರೆ ಎಂದು ದೂರಿದ್ದಾರೆ. ಈ ಹಿಂದೆಯೂ ಕಾರುಣ್ಯ ರಾಮ್, ಸಮೃದ್ಧಿ ರಾಮ್ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಎನ್‌ಸಿಆರ್ ದಾಖಲಾಗಿತ್ತು. ಇದೀಗ ಸಿಸಿಬಿಗೆ ದೂರು ನೀಡಿದ್ದಾರೆ.








