


ಬಂಟ್ವಾಳ: ಪ್ರೀತಿಸಿದ ಯುವತಿಗೆ ಚಾಕು ಇರಿದು ಕೊಲೆಗೆ ಯತ್ನಿಸಿ ಬಳಿಕ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ. ಚೂರಿ ಇರಿತಕ್ಕೊಳಗಾದ ಯುವತಿಯನ್ನು ಫರಂಗಿಪೇಟೆ ನಿವಾಸಿ ಕುಮಾರಿ ದಿವ್ಯಾ ಯಾನೆ ದೀಕ್ಷಿತಾ (26) ಎಂದು ಗುರುತಿಸಲಾಗಿದ್ದು. ಆತ್ಮಹತ್ಯೆ ಮಾಡಿಕೊಂಡ ಯುವಕನ್ನು ಕೋಡ್ಮನ್ ಗ್ರಾಮ ನಿವಾಸಿ ಸುಧೀರ್ (30) ಎಂದು ತಿಳಿದು ಬಂದಿದೆ.
ಪೊಲೀಸ್ ಮಾಹಿತಿ ಪ್ರಕಾರ ಫರಂಗಿಪೇಟೆ ನಿವಾಸಿ ಕುಮಾರಿ ದಿವ್ಯಾ ಯಾನೆ ದೀಕ್ಷಿತಾ ಹಾಗೂ ಕೋಡ್ಮನ್ ಗ್ರಾಮ ನಿವಾಸಿ ಸುಧೀರ್ ಸುಮಾರು 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕಳೆದ ಕೆಲ ತಿಂಗಳುಗಳಿಂದ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿರುತ್ತದೆ. ಯುವತಿ ದಿವ್ಯಾ ಸುಧೀರ ಜೊತೆ ಮಾತುಕತೆ ನಿಲ್ಲಿಸಿದ್ದಳು. ಆದರೂ ಸಹ ಆರೋಪಿ ಸುಧೀರ್ ಫೋನ್ ಮಾಡುವುದು, ಹಿಂಬಾಲಿಸುವುದು, ಮಾಡುತ್ತಿದ್ದ ಎಂದು ಹೇಳಲಾಗಿದೆ.
ಇಂದು ಬೆಳಿಗ್ಗೆ ಫರಂಗಿಪೇಟೆ, ಸುಜೀರ್ ಮಲ್ಲಿ ಎಂಬಲ್ಲಿಗೆ ಆರೋಪಿ ಸುದೀರ್ ಮತ್ತು ದಿವ್ಯಾ ಮಾತುಕತೆಗೆ ಬಂದಿದ್ದಾರೆ. ಈ ವೇಳೆ ಆರೋಪಿ ಸುಧೀರ್ ದಿವ್ಯಾಳೊಂದಿಗೆ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆಸಿ ಗಲಾಟೆ ನಡೆದಿದೆ. ಈ ವೇಳೆ ಆರೋಪಿ ಸುಧೀರ್ ತಾನು ತಂದಿದ್ದ ಚಾಕುವಿನಿಂದ ದಿವ್ಯಾನನ್ನು ಸಾಯಿಸಲು ಚುಚ್ಚಿರುತ್ತಾನೆ. ಆಕೆ ತಪ್ಪಿಸಿಕೊಂಡು ಓಡಿ ಹೋಗಿ ಬಿದ್ದಿದ್ದಾಳೆ. ಆಕೆ ಮೃತಪಟ್ಟಿರಬಹುದೆಂದು ಭಾವಿಸಿ ಆರೋಪಿಯು ಅಲ್ಲಿಂದ ತೆರಳಿ ದಿವ್ಯಾಳ ಬಾಡಿಗೆ ಮನೆಗೆ ಹೋಗಿ, ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.