Thursday, August 20, 2026
spot_imgspot_img
spot_imgspot_img

ಬಂಟ್ವಾಳ : ಹಾಡಹಗಲೇ ತಲವಾರು ತೋರಿಸಿ ದರೋಡೆ; ಬೈಕ್ ಸವಾರನಿಂದ 8 ಲಕ್ಷ ದೋಚಿ ಪರಾರಿ..!

- Advertisement -
- Advertisement -

ಬಂಟ್ವಾಳ: ತಾಲೂಕಿನ ಮುಲ್ಕಾಜೆ ಮಾಡ ಎಂಬಲ್ಲಿ ಹಾಡಹಗಲೇ ಬೈಕ್ ಸವಾರನನ್ನು ಅಡ್ಡಗಟ್ಟಿ ನಾಲ್ವರು ದರೋಡೆ ನಡೆಸಿರುವ ಘಟನೆ ಇಂದು(ಆ.20) ನಡೆದಿದೆ.

ಮಂಗಳೂರಿನ ಕಣ್ಣೂರು ಎಂಬಲ್ಲಿರುವ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟದ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಸುರತ್ಕಲ್ ನಿವಾಸಿ, ಮಯ್ಯದಿ ಎಂಬವರು ವಿವಿಧ ಅಂಗಡಿಗಳಿಗೆ ಹೋಲ್‌ಸೇಲ್‌ನಲ್ಲಿ ಪೂರೈಸಿದ್ದ ಸಿಮೆಂಟ್‌ನ ಹಣವನ್ನು ವಸೂಲಿ ಮಾಡಿಕೊಂಡು ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ವ್ಯಕ್ತಿಗಳು ಬೈಕ್ ಸವಾರನನ್ನು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿದ್ದಾರೆ. ಬಳಿಕ ಸವಾರನ ಬಳಿಯಿದ್ದ ಹಣದ ಬ್ಯಾಗ್‌ನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಬ್ಯಾಗ್‌ನಲ್ಲಿ ರೂ. 8 ಲಕ್ಷಕ್ಕೂ ಅಧಿಕ ಹಣ ಇತ್ತು ಎನ್ನಲಾಗಿದ್ದು, ಘಟನೆಯು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ಹಾಗೂ ಎಸ್‌ಐ ಮಂಜುನಾಥ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳು ಬಂದಿದ್ದ ಬೈಕ್‌ಗಳು, ಅವರ ಚಲನವಲನ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ. ಘಟನೆಯ ಸಂಪೂರ್ಣ ವಿವರ ಹಾಗೂ ದರೋಡೆಗೊಳಗಾದ ಹಣದ ನಿಖರ ಮೊತ್ತ ತನಿಖೆ ಪೂರ್ಣಗೊಂಡ ಬಳಿಕ ಸ್ಪಷ್ಟವಾಗಬೇಕಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!