ಬಂಟ್ವಾಳ (ಅ.29): ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ಫರಂಗಿಪೇಟೆಯಲ್ಲಿನ ದಿನೇಶ್ ರವರ ತೃಷಾ ಪೋಟೊ ಸ್ಟುಡಿಯೋಕ್ಕೆ 4 ಜನ ಯುವಕರು ಪೋಟೊ ತೆಗೆಸುವಂತೆ ಬಂದು ಪೊಟೋಗ್ರಾಫರ್, ಸ್ಥಳೀಯ ಬಿಜೆಪಿ ಮುಖಂಡ ದಿನೇಶ್ ಅವರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.

ಇತ್ತೀಚೆಗೆ ಕುಂಪನಮಜಲು ಎಂಬಲ್ಲಿ ಹೆಣ್ಣು ಮಗುವಿನ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದಿನೇಶ್ ರವರು ಹೆಣ್ಣು ಮಗುವಿನ ಕಡೆಯವರಿಗೆ ಬೆಂಬಲ ನೀಡಿದ್ದ ದ್ವೇಷದಿಂದ ಈ ಹಲ್ಲೆ ನಡೆದಿದೆ.

ದಿನೇಶ್ ಅವರನ್ನು ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ತಲೆಗೆ,ಬಲ ಕೈಗೆ ಹಾಗೂ ಎಡ ಕಿಬ್ಬೊಟ್ಟೆಗೆ ಹಲ್ಲೆ ನಡೆಸಿ ತೀವ್ರ ಗಾಯವಾಗಿದ್ದು,ಆ ವೇಳೆಯಲ್ಲಿ ಅಲ್ಲಿದ್ದ ಶೇಖರ ಪೂಜಾರಿ ರವರು ಹಲ್ಲೆಯಾಗುವುದನ್ನು ತಪ್ಪಿಸಲು ಅಲ್ಲೇ ಇದ್ದ ಚೇರ್ ನಿಂದ ಜೋರಾಗಿ ಇಬ್ಬರು ಆರೋಪಿಗಳಿಗೆ ಹೊಡೆದಿದ್ದು ಅವರ ಕೈಗೆ ಗಾಯವಾಗಿರುತ್ತದೆ,ನಂತರ ದಿನೇಶ್ ರವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಅಮ್ಮೆಮ್ಮಾರು ನಿವಾಸಿ ಮಹಮ್ಮದ್ ಅರ್ಷದ್(19),ಅಬ್ದುಲ್ ರೆಹಮಾನ್(22) ಮತ್ತು ಮಹಮ್ಮದ್ ಸೈಪುದ್ದೀನ್(22) ರವರನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್, ಹಾಗೂ ಪೊಲೀಸ್ ಉಪಾಧೀಕ್ಷಕರಾದ ವೆಲಂಟೈನ್ ಡಿಸೋಜ, ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಪ್ರಸನ್ನ ಹಾಗೂ ಸಿಬ್ಬಂದಿ ದಸ್ತಗಿರಿ ಮಾಡಿದ್ದಾರೆ. ಮತ್ತೊಬ್ಬ ಆರೋಪಿ ಸವಾದ್ ನ ದಸ್ತಗಿರಿಗೆ ವಿಶೇಷ ತಂಡವು ಶ್ರಮಿಸುತ್ತಿದೆ.ತನಿಖೆ ಮುಂದುವರೆದಿರುತ್ತದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









