


ಭಟ್ಕಳ: ಕಾಡುಹಂದಿಯೊಂದು ಏಕಾಏಕಿ ರಸ್ತೆಗೆ ಅಡ್ಡ ಬಂದ ಪರಿಣಾಮ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ–ಸಾಗರ ರಾಜ್ಯ ಹೆದ್ದಾರಿ–50ರಲ್ಲಿ, ಭಟ್ಕಳ ನಗರಸಭೆಯ ತ್ಯಾಜ್ಯ ವಿಲೇವಾರಿ ಮೈದಾನದ ಸಮೀಪ ಶನಿವಾರ ಸಂಜೆ ನಡೆದಿದೆ.

ಗಾಯಗೊಂಡ ಚಾಲಕನನ್ನು ಆಸರ್ಕೇರಿ ನಿವಾಸಿ ಶಶಿಕಾಂತ ರಾಮಚಂದ್ರ ಶೆಟ್ಟಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಅವರಿಗೆ ತಲೆ, ಕೈ ಹಾಗೂ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆಗಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಆಟೋದಲ್ಲಿದ್ದ ಮಹಿಳಾ ಪ್ರಯಾಣಿಕ ಪದ್ಮಾವತಿ (ಭಟ್ಕಳ ತಾಲೂಕು ಕೋಟಖಂಡ್–ಮರುಕೇರಿ ನಿವಾಸಿ, ತರಕಾರಿ ವ್ಯಾಪಾರಿ) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಪದ್ಮಾವತಿ ನೀಡಿದ ದೂರಿನಂತೆ, ಅವರು ಭಟ್ಕಳ ಪಟ್ಟಣದಿಂದ ಕೋಟಖಂಡ್–ಮರುಕೇರಿ ಕಡೆಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ತ್ಯಾಜ್ಯ ವಿಲೇವಾರಿ ಮೈದಾನದ ಬಳಿ ಕಾಡುಹಂದಿಯೊಂದು ಅಚಾನಕ್ ರಸ್ತೆಗೆ ನುಗ್ಗಿತು. ಹಂದಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ತುರ್ತುವಾಗಿ ಬ್ರೇಕ್ ಹಾಕಿದ ಪರಿಣಾಮ ಆಟೋ ನಿಯಂತ್ರಣ ತಪ್ಪಿ ಪಲ್ಟಿಯಾಯಿತು.
ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








