Wednesday, July 2, 2025
spot_imgspot_img
spot_imgspot_img

ನಮ್ಮ ದೇಶವೆಂಬ ಅಭಿಮಾನವಿರಲಿ

- Advertisement -
- Advertisement -

ಯಾಕೋ ಒಮ್ಮೆ ಮುಚ್ಚಿದ ಬಾಗಿಲನ್ನು ತೆರೆದಾಗ ಹೊರಗಿನ ಪ್ರಪಂಚ ಕಾಣಲಾರಂಭಿಸಿತು. ಎಷ್ಟು ಸುಂದರ ನೋಟ. ಹಸಿರು ಗಿಡ ಮರಗಳು ಅವುಗಳೆಡೆಯಿಂದ ತೂರಿಬರುವ ಕಿರಣಗಳು ನಾ ಮುಂದೆ ತಾ ಮುಂದೆ ಎಂದು ಪೈಪೋಟಿ ಮಾಡತೊಡಗಿದ್ದವು. ಇದು ಒಂದು ಕಡೆ ಒಳಿತಿನ ಪ್ರಯಾಣವೇ ಆಗಿರುವುದು. ಆದರೆ ಮನುಷ್ಯ ಅದೇ ಒಳಿತಿನ ದಾರಿಯಲ್ಲಿ, ಯಾರೂ ನೋಡುತ್ತಾ ಇಲ್ಲದಿರುವಾಗ ಮೇಲೊಬ್ಬ ನೋಡುತ್ತಿರುವನೆಂಬ ಅರಿವೇ ಇಲ್ಲದೇ ಎಸೆಯುವ ಪ್ಲಾಸ್ಟಿಕ್ ನಲ್ಲಿ ಕಟ್ಟಿದ ತ್ಯಾಜ್ಯಗಳು ಮಣ್ಣಿನೊಳಗೆ ಮಿಳಿತವಾಗುವುದಿಲ್ಲವೆಂದು ಆತನಿಗೆ ಗೊತ್ತು. ಸುಶಿಕ್ಷಿತ ಬೇರೆ. ಆದರೂ ಎಸೆದೇ ಬಿಡುತ್ತಾನೆ. ಎಸೆಯುವುದು ಅಪರಾಧವಲ್ಲವೇನು? ಮಾನವ ಧರ್ಮವನ್ನು ಮೀರುವುದು ಯಾಕೆ? ತರಕಾರಿ, ಹಣ್ಣು ಹಂಪಲುಗಳ ತ್ಯಾಜ್ಯವಾದರೂ ಹಾಗೆಯೇ ಎಸೆದರೂ ತೊಂದರೆಯಾಗದು. ಆದರೆ ಪ್ಲಾಸ್ಟಿಕ್ ಎಂಬ ಮಹಾ ಮಾರಿಯ ಒಳಗೆ ಬಚ್ಚಿಟ್ಟು ಅದನ್ನು ಕಟ್ಟಿ ಎಸೆಯುವುದು ಅಯ್ಯೋ ದೇವರೇ ಎಷ್ಟು ಹೇಳಿದರೂ ಬುದ್ಧಿ ಬಾರದು, ಅರಿಯಲೂ ಆಗದು. ಯಾಕೆ ಹೀಗಾಗುತ್ತಿದೆ? ಮಕ್ಕಳು ಮರಿ ಮುದುಕರು ಎಂಬ ಭೇದ ಭಾವವಿಲ್ಲದೆ ಹೀಗೆ ಎಗ್ಗಾಸಗ್ಗ ಎಸೆದು ಬಿಡುವ ಪರಿಹಾರ ನೀಡುವುದೇನು? ಈಚೆಯಿಂದ ಆಚೆಗೆ ಇಟ್ಟ ಭಾರದ ರೀತಿ ಆದಂತೆಯೇ ಇದು. ಒಂದು ಕೈಯಲ್ಲಿ ಎತ್ತಿದ ಭಾರವನ್ನು ಸಹಿಸಲಾಗದೇ ಇನ್ನೊಂದು ಕೈಗೆ ವರ್ಗಾಯಿಸಿದಂತೆ ಆಗುವುದಲ್ಲವೇ? ಆದರೆ ಕೈ ಎರಡೂ ನಮ್ಮವೇ ತಾನೇ? ಬಲವಾದರೇನು ಎಡವಾದರೇನು ಕೈ ಕೈಯೇ ತಾನೇ? ಹಾಗೆಯೇ ಕಸವು ಮುಖ್ಯವಾಗಿ ಪ್ಲಾಸ್ಟಿಕ್ ಗಳಲ್ಲಿ ತುಂಬಿ ಎಸೆಯುವ ಕಸ ಇಲ್ಲಿಂದ ಅಲ್ಲಿಗೆ ಎಸೆದರೆ ಪರಿಹಾರವಾಯಿತೇ? ಇಲ್ಲವಲ್ಲ. ಮಣ್ಣಿನಲ್ಲಿ ಕೆಲವೊಂದು ವಸ್ತುಗಳು ಕರಗುತ್ತವೆ. ಸಾವಯವವಾಗುತ್ತವೆ. ಆದರೆ ಪ್ಲಾಸ್ಟಿಕ್ ಕರಗುವುದೇ ಇಲ್ಲ. ಮತ್ತೆ ಹೇಗೆ ಸಾವಯವವಾಗುವುದು? ಭೂಮಿಯ ಒಡಲು ಹೀಗೆ ಪ್ಲಾಸ್ಟಿಕ್ ಗಳಿಂದಲೇ ತುಂಬಿದಾಗ ಆಹಾರ ಉತ್ಪನ್ನಗಳು ಸಾವಯವ ರೀತಿಯಲ್ಲಿ ಹೇಗೆ ಉತ್ಪಾದಿಸಲ್ಪಡುತ್ತವೆ? ನೀರಿನೊಳಗೆ ಸೇರಿದ ಪ್ಲಾಸ್ಟಿಕ್ ತ್ಯಾಜ್ಯವು ಪ್ರವಾಹಕ್ಕೆ ದಾರಿಯಾಗುತ್ತದೆ. ಒಳಿತನ್ನು ಕಾಣಬೇಕಾದರೆ ಒಳಿತನ್ನೇ ಬಯಸಬೇಕು ಹಾಗೆಯೇ ಮಾಡಬೇಕು . ಅಂಧ ಶ್ರದ್ಧೆಯು ನಮ್ಮನ್ನು ಎಂದಾದರೊಂದು ದಿನ ಬಾಧಿಸದೇ ಇರದು. ಅಂದು ವಿಷವನ್ನು ಕುಡಿದು ದೇವ ಪರಮೇಶ್ವರ ವಿಷಕಂಠನಾಗಿ ಲೋಕ ರಕ್ಷಿಸಿದ. ಇಂದು ಈ ಪ್ಲಾಸ್ಟಿಕ್ ಎಂಬ ವಿಷವನ್ನು ಯಾರು ತಡೆದು ಲೋಕೋದ್ಧಾರ ಮಾಡುವುದು ಎಂಬುದೇ ಯಕ್ಷಪ್ರಶ್ನೆಯಾಗಿದೆ.

ನಾವು ಬಳಸುವ ಸ್ವರಾಕ್ಷರಗಳು ಪರಮಾತ್ಮ ಶಂಕರನು ತನ್ನ ಡಮರುವನ್ನು ಬಾರಿಸಿದಾಗ ಉತ್ಪತ್ತಿಯಾದವು. ಆ ಶಬ್ದಗಳನ್ನು ಪಾಣಿನಿ ವಿದ್ವಾಂಸ ಆದರಿಸಿ ಸ್ವರಾಕ್ಷರಗಳನ್ನು ರಚಿಸಿದನೆಂದು ಹೇಳಲ್ಪಟ್ಟಿದೆ. ಆ ದಿಂದ ಅ: ದವರೆಗೆ ಅಂದರೆ ಮೊದಲ ಸಾಲುಗಳು ಎಲ್ಲವೂ ಕಂಠದಿಂದ ಬರುವಂತಹ ಶಬ್ದಗಳಾದ ಕಾರಣ ಕಂಠವ್ಯ ಆಯಿತು. ಹಾಗೆಯೇ ಕಂಠದಿಂದ ಸ್ವಲ್ಪ ಮೇಲಿನ ಭಾಗ, ನಾಲಿಗೆಯ ಮಧ್ಯಭಾಗ, ನಾಲಿಗೆಯನ್ನು ಸ್ವಲ್ಪ ತಿರುಗಿಸಿ ಹೇಳುವಂತಹ ಶಬ್ದಗಳ ಗುಂಪು ಮತ್ತೂ ಮುಂದಕ್ಕೆ ನಾಲಗೆಯ ತುದಿ ಮತ್ತು ಹಲ್ಲುಗಳ ಸಹಾಯದಿಂದ ಹೇಳುವಂತದ್ದು, ಅದೇ ರೀತಿ ತುಟಿಗಳ ಸಹಾಯದಿಂದ ಹೇಳಲಾಗುವಂತದ್ದು ಎಲ್ಲವೂ ಸೇರಿ ಅಕ್ಷರಗಳಾಗಿವೆ. ಹಾಗಾಗಿ ಪರಮಾತ್ಮ ಶಿವನು ಅಕ್ಷರಪ್ರಿಯ, ನಾಟ್ಯಪ್ರಿಯ ಎಲ್ಲವೂ ಆಗಿದ್ದಾನೆ. ಇನ್ನು ಕೆಲವೊಂದು ವಾಕ್ಯಗಳು ಅದರ ಪದಗಳನ್ನು ಹೇಗೆ ತಿರುಗಿಸಿ ಹೇಳಿದರೂ ಅದರಲ್ಲಿ ಅರ್ಥ ವ್ಯತ್ಯಾಸ ಆಗುವುದಿಲ್ಲ . ಉದಾಹರಣೆಗೆ ಹೇಳುವುದಾದರೆ ರಾಮನು ರಾವಣನನ್ನು ಕೊಂದನು. ಇದರಲ್ಲಿ ಮೂರು ಪದಗಳಿದ್ದು ಆ ಪದಗಳನ್ನು ಹೇಗೆ ಬಳಸಿದರೂ ಅರ್ಥ ವ್ಯತ್ಯಾಸ ಆಗಲಾರದು . ರಾವಣನನ್ನು ರಾಮನು ಕೊಂದನು, ಕೊಂದನು ರಾಮನು ರಾವಣನನ್ನು, ಕೊಂದನು ರಾವಣನನ್ನು ರಾಮನು, ರಾಮನು ಕೊಂದನು ರಾವಣನನ್ನು ಹೀಗೆ ಹೇಗೇ ಹೇಳಿದರೂ ಅರ್ಥ ವ್ಯತ್ಯಾಸವಂತೂ ಆಗಲಾರದು. ಆದರೆ ಇಂಗ್ಲಿಷ್ ಭಾಷೆಯಲ್ಲಿ ರಾಮ ಕಿಲ್ಡ್ ರಾವಣ( Rama killed Ravana ) ಅದನ್ನೇ ಉಲ್ಟಾ ಮಾಡಿ ಹೇಳಿದರೆ ಇನ್ನೊಂದು ರಾಮಾಯಣವೇ ಆದೀತು.!! ಹಾಗಾಗಿ ಭಾಷೆ ಎಂಬುದು ಭಗವಂತ ನಮಗೆ ಒದಗಿಸಿದ್ದು. ಹಾಗಾಗಿ ನಾವುಗಳೆಲ್ಲ ನಮ್ಮ ನಮ್ಮ ಭಾಷೆಯನ್ನು ಪ್ರೀತಿಸಲೇಬೇಕು.

ಇಷ್ಟು ದಿನ ಒಳ್ಳೆಯ ಭಾವನೆಯಿಂದ, ಒಳ್ಳೆಯ ಮನಸ್ಸಿನಿಂದ, ಒಳ್ಳೆಯ ಕಾರ್ಯಗಳಿಂದ ಮುಂದೆ ಹೋಗುತ್ತಾ ಇದೆ. ಬರಲಿರುವ ದಿನವೂ ಆ ದೇವರ ಚಿತ್ತವೇ ಎಂದರಿತು ಬಾಳನ್ನು ಸಾಗಿಸುವುದು ಉತ್ತಮ. ಎಷ್ಟೇ ಅನುಕೂಲಗಳಿದ್ದರೂ ಇಲ್ಲದಿರುವುದರ ಕೊರತೆಯೇ ಒಮ್ಮೊಮ್ಮೆ ಎದ್ದು ಕಾಣುತ್ತದೆ. ಅದಕ್ಕಾಗಿ ಮನಸ್ಸನ್ನು ಬೇಸರಿಸಿಕೊಳ್ಳುತ್ತೇವೆ. ಆಪ್ತರಿಗೆ ನೋವು ಕೊಟ್ಟು ಅವರನ್ನೂ ಯಾತನೆಪಡಿಸಿ ನಾವೂ ಯಾತನೆ ಅನುಭವಿಸುತ್ತೇವೆ.. ಇರುವುದು ಸಾಕಲ್ಲ ಎಂಬ ವಿಶಾಲ ಮನೋಭಾವ ಬೆಳೆದಾಗ ಅಲ್ಲಿ ನಿರೀಕ್ಷೆಗಳ ನೋವು ಕಾಡುವುದೇ ಇಲ್ಲ . ಸಂತೋಷಕ್ಕೂ ದುಃಖ ಪಡುವುದಕ್ಕೂ ಕಾರಣವೇ ಈ ಮನಸ್ಸು. ಅದು ಕಾಶ್ಮೀರದಿಂದ ಕನ್ಯಾಕುಮಾರಿಯಷ್ಟು ಉದ್ದದ ಬೇಡಿಕೆಯ ಪಟ್ಟಿಗಳನ್ನು ಹಚ್ಚಿಟ್ಟುಕೊಳ್ಳುತ್ತದೆ. ಯಾವುದಾದರೂ ಕಾರ್ಯಗಳು ವಿಳಂಬವಾದರೆ ಅದರದೇ ಆದ ಟೀಕೆ, ವ್ಯಾಖ್ಯಾನ, ಹಾಸ್ಯ, ಲಘು ಪ್ರಹಾರ, ಎಲ್ಲವುಗಳೂ ಬಂದುಬಿಡುತ್ತವೆ. ಮುಖ್ಯ ಉದ್ದೇಶ ಈಡೇರಿತಲ್ಲ ಎಂದು ಸಂಭ್ರಮಿಸುವವರು ತುಂಬಾ ಕಡಿಮೆ. ಆ ಬೇಡಿಕೆ ಪಟ್ಟಿಗಳಲ್ಲಿ ಅದು ಎಷ್ಟೊಂದು ಅನಿವಾರ್ಯವಲ್ಲದವುಗಳೂ ಸೇರಿಕೊಂಡಿರುತ್ತವೆ.. ಅದನ್ನೆಲ್ಲವನ್ನೂ ತಿಳಿಗೊಳಿಸುತ್ತಾ ಬಂದರೆ ಮನವೂ ತಿಳಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ವರ್ಷಗಳುರುಳಿದಂತೆ ಮಕ್ಕಳಿಗೆ ಶಾಲೆ ಪ್ರಾರಂಭವಾಗುತ್ತದೆ. ಯಾವ್ಯಾವ ಕಾಲಕ್ಕೆ ಯಾವ್ಯಾವುದು ಬರಬೇಕೆಂದು ಆ ದೇವರಿಚ್ಛೆ. ಅದು ಹೊರತು ನಮ್ಮದೇನೂ ನಡೆಯುವುದಿಲ್ಲ. ಶಾಲಾ ಪ್ರಾರಂಭದ ಹೊಸ ಉತ್ಸಾಹ ಹೊಸ ವರುಷದಂತೆ ಹಬ್ಬವನ್ನು ಆಚರಿಸುವ ಸಿದ್ಧತೆ ಆಗುತ್ತಿದೆ, ಆಗುತ್ತಲಿದೆ. ಮಕ್ಕಳು ಅಷ್ಟೇ ಖುಷಿಯಿಂದ ಕಾತರತೆಯಿಂದ ಕಾಯುತ್ತಿದ್ದಾರೆ. ಯಾವಾಗ ಶಾಲೆಯೆಂಬ ದೇಗುಲಕ್ಕೆ ಹೋದೇನು? ಎಂಬ ಕೌತುಕವೇ ತುಂಬಿಕೊಂಡಿರುತ್ತದೆ ಶಾಲೆಯನ್ನು, ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಾವು ನಮ್ಮ ರಸ್ತೆ, ನಮ್ಮ ಕೊಳ, ನಮ್ಮ ಬೀದಿ, ನಮ್ಮ ರಾಜ್ಯ, ನಮ್ಮ ದೇಶ ಎಂಬ ಅಭಿಮಾನವನ್ನು ಬೆಳೆಸುತ್ತಾ ಬಾಳುವುದು ಈ ಮಣ್ಣಿನ ಸಂಸ್ಕೃತಿಗೆ ನೀಡುವ ಗೌರವವೇ ಹೌದು. ಮನ ಮಾಡುವಿರಾ?

✍🏻 ಮಲ್ಲಿಕಾ ಜೆಆರ್ ರೈ ಪುತ್ತೂರು
ಅಧ್ಯಕ್ಷರು ಎಸ್ ಸಿ ಐ ಪುತ್ತೂರು ಲಿಜನ್

- Advertisement -

Related news

error: Content is protected !!