


ಬೆಳ್ತಂಗಡಿ: ಮನೆ ಸಮೀಪದ ಕಾಡಿಗೆ ತೆರಳಿ ನಾಪತ್ತೆಯಾಗಿದ್ದ ವೃದ್ಧರೊಬ್ಬರು ಆರು ದಿನಗಳ ಬಳಿಕ ಪತ್ತೆಯಾದ ಘಟನೆ ಶಿಬಾಜೆ ಗ್ರಾಮದ ಐಂಗುಡ ಎಂಬಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ತಂಡ ಅವರನ್ನು ಪತ್ತೆ ಹಚ್ಚಿ ಮನೆಗೆ ಸೇರಿಸಿದೆ.
ನಾಪತ್ತೆಯಾದ ವೃದ್ಧ ಶಿಬಾಜೆ ಗ್ರಾಮದ ಐಂಗುಡ ನಿವಾಸಿ ವಾಸು ರಾಣ್ಯ(83) ಎಂದು ಗುರುತಿಸಲಾಗಿದೆ.
ವಾಸು ರಾಣ್ಯ ಮೇ 21ರ ಬೆಳಗ್ಗೆ ಕೈಯಲ್ಲೊಂದು ಕತ್ತಿ ಹಿಡಿದು, ಮನೆ ಸಮೀಪವಿರುವ ಗುಡ್ಡಕ್ಕೆ ತೆರಳಿದ್ದರು. ಕಟ್ಟಿಗೆ ತರಲು ಹೋಗಿರಬಹುದು ಎಂದು ಮನೆಯವರು ಭಾವಿಸಿದ್ದರು. ಮಧ್ಯಾಹ್ನದವರೆಗೂ ವಾಸು ರಾಣ್ಯ ಮನೆಗೆ ಬರದೇ ಇದ್ದಾಗ, ಸ್ಥಳೀಯರ ಜತೆ ಹುಡುಕಾಡಿದರು. ಸುಮಾರು ಐದು ದಿನಗಳ ಕಾಲ ಸುತ್ತಮುತ್ತ ಹುಡುಕಿದರೂ ವಾಸು ರಾಣ್ಯ ಪತ್ತೆಯಾಗಿರಲಿಲ್ಲ.
ಮೇ 26ರ ಬೆಳಗ್ಗೆ ಮನೆಯವರು ಆಡು ಮೇಯಿಸಲೆಂದು ಮನೆ ಸಮೀಪವಿರುವ ಗುಡ್ಡೆಗೆ ತೆರಳಿದಾಗ ಕೂ…ಕೂ…ಎಂಬ ಕೂಗು ಕೇಳಿ ಬಂತೆನ್ನಲಾಗಿದೆ. ಈ ಕೂಗಿನ ಜಾಡು ಹಿಡಿದು ಸ್ಥಳೀಯರು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ತಂಡದವರು ಹುಡುಕಾಟ ನಡೆಸಿದಾಗ ಭಂಡಿಹೊಳೆ ಕಾಡಿನ ಸುಮಾರು 2.5 ಕಿ. ಮೀ. ದೂರದಲ್ಲಿ ವಾಸು ರಾಣ್ಯ ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ಕೊಕ್ಕಡ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ವಾಸು ರಾಣ್ಯ ಆರೋಗ್ಯವಾಗಿದ್ದು, ತನ್ನನ್ನು ಯಾರೋ ಬಾ.. ಬಾ.. ಎಂದು ಕರೆದಂತಾಯಿತು. ಹಾಗಾಗಿ ಧ್ವನಿಯ ಹಿಂದೆ ನಾನು ಹೋದೆ. ಆಹಾರವನ್ನೇನೂ ತಾನು ತೆಗೆದುಕೊಳ್ಳದೆ ಕೇವಲ ನೀರು ಮಾತ್ರ ಕುಡಿಯುತ್ತಿದೆ ಎಂದು ಕನವರಿಕೆಯಂತೆ ಹೇಳುತ್ತಿದ್ದಾರೆ.
ವಾಸು ಅವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಶೌರ್ಯ ವಿಪತ್ತು ತಂಡದ ಅವಿನಾಶ್ ಭಿಡೆ, ಶೀನಪ್ಪ, ಗಂಗಾಧರ ಶಿಶಿಲ, ಕುಶಾಲಪ್ಪ ಶಿಶಿಲ, ಪ್ರವೀಣ್ ಪತ್ತಿಮಾರು, ಮತ್ತು ಸ್ಥಳೀಯರಾದ ಗೋವಿಂದ, ಗಣೇಶ್, ಸುರೇಶ, ಪುನೀತ್, ಶರತ್, ಶಶಿಕಾಂತ್, ವಿಶ್ವನಾಥ್, ಕೃಷ್ಣ ನಾಯ್ಕ ಮತ್ತು ವಾಸು ರಾಜ್ಯರ ಪುತ್ರರಾದ ಕಮಲಾಕ್ಷ ಮತ್ತು ಸುರೇಶ್ ಮತ್ತು ರಾಣ್ಯ ಕುಟುಂಬಸ್ಥರು ಸಹಕರಿಸಿದರು.