Sunday, August 2, 2026
spot_imgspot_img
spot_imgspot_img

ಬೆಳ್ತಂಗಡಿ: ಮುಂಡಾಜೆಯಲ್ಲಿ ದಾಖಲೆಯ 348.5 ಮಿ.ಮೀ ಮಳೆ

- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿಯ ಮುಂಡಾಜೆಯಲ್ಲಿ ದಾಖಲೆಯ 348.5 ಮಿ.ಮೀ ಮಳೆಯಾಗಿದ್ದರೆ, ಅದೇ ತಾಲೂಕಿನ ಕಲ್ಮಂಜದಲ್ಲಿ 283.5 ಮಿ.ಮೀ ಮಳೆಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಆಗಸ್ಟ್‌ 1 ಶನಿವಾರ ಬೆಳಗ್ಗೆ 8:30 ರಿಂದ ಆಗಸ್ಟ್‌ 2ರ 7:30ರ ವೇಳೆಗೆ 50 ಮಿ ಮೀಗಿಂದ ಹೆಚ್ಚು ಮಳೆಯಾದ ಸ್ಥಳಗಳ ವಿವರವನ್ನು ಪ್ರಕಟಿಸಿದೆ.

ಮುಂಡಾಜೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶನಿವಾರ ಭಾರೀ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಪ್ರಮುಖ ನದಿ ಮತ್ತು ತೋಡುಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ನದಿ-ತೋಡುಗಳ ನೀರು ಸನಿಹದ ಕೃಷಿ ಭೂಮಿಗಳಿಗೆ ನುಗ್ಗಿದ್ದು, ನೂರಾರು ಎಕರೆ ಗದ್ದೆ ಮತ್ತು ಅಡಿಕೆ-ತೆಂಗಿನ ತೋಟಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಹಲವಾರು ತೋಟಗಳಿಗೆ ನೀರು ನುಗ್ಗಿರುವ ಪರಿಣಾಮ ಕೃಷಿಕರು ಭಾರೀ ಕೃಷಿ ಹಾನಿಯ ಭೀತಿಯಲ್ಲಿದ್ದಾರೆ. ಅಷ್ಟೇ ಅಲ್ಲದೆ, ತಗ್ಗಿನ ಪ್ರದೇಶದಲ್ಲಿದ್ದ ಕೆಲವು ಮನೆಗಳಿಗೂ ಪ್ರವಾಹದ ನೀರು ನುಗ್ಗಿದ್ದು, ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆಯ ತೀವ್ರತೆಗೆ ಮುಂಡಾಜೆ-ಧರ್ಮಸ್ಥಳ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು, ರಸ್ತೆಗೆ ಮಣ್ಣು ಮತ್ತು ಬಂಡೆಗಳು ಕುಸಿದು ಬಿದ್ದಿದ್ದರಿಂದ ಈ ಮಾರ್ಗದಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಉಜಿರೆ-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಮೇಲೆಯೂ ಪ್ರವಾಹದ ನೀರು ನದಿಯಂತೆ ಹರಿಯುತ್ತಿದ್ದು, ಸಂಚಾರ ತೀವ್ರ ಅಡಚಣೆಗೊಂಡಿದೆ. ವಾಹನ ಸವಾರರು ಮತ್ತು ಧರ್ಮಸ್ಥಳಕ್ಕೆ ತೆರಳುವ ಭಕ್ತಾದಿಗಳು ಜಾಗರೂಕರಾಗಿರುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!