Tuesday, March 2, 2021

ವೈದ್ಯೆಯರು ಡ್ರೆಸ್ ಚೇಂಜ್ ಮಾಡುತ್ತಿದ್ದಾಗ ವೀಡಿಯೋ ರೆಕಾರ್ಡ್- ನರ್ಸ್ ಬಾಯ್ ಅರೆಸ್ಟ್!

ಬೆಂಗಳೂರು: ವೈದ್ಯೆಯರು ಆಸ್ಪತ್ರೆಯಲ್ಲಿ ಡ್ರೆಸ್ ಚೇಂಜ್ ಮಾಡುತ್ತಿದ್ದಾಗ ವೀಡಿಯೋ ಚಿತ್ರೀಕರಿಸುತ್ತಿದ್ದ ನರ್ಸ್ ಹುಡುಗನನ್ನು ಬೆಂಗಳೂರಿನ ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮಾರುತೇಶ್(31) ಎಂದು ಗುರುತಿಸಲಾಗಿದ್ದು, ಸಂಜಯ್ ಗಾಂಧಿ ಇನ್‍ಸ್ಟಿಟ್ಯೂಟ್ ಆಫ್ ಟ್ರಾಮಾ ಆ್ಯಂಡ್ ಆರ್ಥೋಪೆಡಿಕ್ಸ್ ನಿರ್ದೇಶಕರ ದೂರಿನ ಆಧಾರದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಸುಮಾರು 9.30ರ ಸುಮಾರಿಗೆ ಮಹಿಳಾ ಸರ್ಜನ್ ಒಬ್ಬರು ಡ್ರಸ್ಸಿಂಗ್ ರೂಮ್‍ನಲ್ಲಿ ಅಡಗಿಸಿಡಲಾಗಿದ್ದ, ವೀಡಿಯೋ ರೆಕಾರ್ಡ್ ಮಾಡುತ್ತಿದ್ದ ಮೊಬೈಲ್ ಗಮನಿಸಿದ್ದಾರೆ. ಮಹಿಳಾ ಸರ್ಜನ್ ತಾವು ಆಪರೇಷನ್ ಥಿಯೇಟರ್‍ಗೆ ತೆರಳುವುದಕ್ಕೂ ಮೊದಲು ಡ್ರೆಸ್ ಚೇಂಜ್ ಮಾಡುತ್ತಿದ್ದಾಗ ವೀಡಿಯೋ ಮಾಡಿರುವುದನ್ನು ತಿಳಿದಿದ್ದಾರೆ.

ಈ ಬಗ್ಗೆ ವೈದ್ಯೆ ಇತರರಿಗೂ ತಿಳಿಸಿದ್ದು, ಕಾಂಟ್ರ್ಯಾಕ್ಟ್ ಆಧಾರ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರಿಗೆ ಮೊಬೈಲ್ ಸೇರಿದೆ ಎಂದು ತಿಳಿಸಿದ್ದಾರೆ. ಬಳಿಕ ವಿಷಯವನ್ನು ಸಂಸ್ಥೆಯ ನಿರ್ದೇಶಕರ ಗಮನಕ್ಕೆ ತಂದಿದ್ದು, ಅವರು ತಿಲಕ್ ನಗರ ಪೊಲೀಸ್ ಠಾಣೆಯನ್ನು ದೂರು ದಾಖಲಿಸಿದ್ದಾರೆ.

ಬಳಿಕ ಆರೋಪಿ ಮಾರುತೇಶ್‍ನನ್ನು ಐಪಿಸಿ ಸೆಕ್ಷನ್ 354-ಸಿ ಹಾಗೂ 201 ಅಡಿ ಬಂಧಿಸಲಾಗಿದೆ. ಆರೋಪಿ ಕೆಲ ತಿಂಗಳಿಂದ ವೈದ್ಯೆಯರು ಡ್ರೆಸ್ ಬದಲಿಸುತ್ತಿದ್ದ ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಿದ್ದ. ಆದರೆ ಯಾವುದೇ ವೀಡಿಯೋಗಳನ್ನು ಯಾರೊಂದಿಗೂ ಹಂಚಿಕೊಂಡಿಲ್ಲ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕೃತ್ಯದಲ್ಲಿ ಇನ್ನೂ ಹೆಚ್ಚು ಜನ ಭಾಗಿಯಾಗಿರುವ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

- Advertisement -

MOST POPULAR

HOT NEWS

Related news

error: Content is protected !!