


ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಕನಿಷ್ಠ ಮಾಸಿಕ ವೇತನವನ್ನು 15 ಸಾವಿರ ರೂಪಾಯಿಗೆ ಹೆಚ್ಚಿಸುವಂತೆ ಆಗ್ರಹಿಸಿರುವ ಕಾರ್ಯಕರ್ತೆಯರು, ಸರ್ಕಾರ ಕೇವಲ ಭರವಸೆ ನೀಡದೆ ಅಧಿಕೃತ ಆದೇಶ ಹೊರಡಿಸುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ನಿನ್ನೆಯಿಂದ(ನ.17) ಆರಂಭವಾಗಿರುವ ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ನಲ್ಲೇ ಧರಣಿ ನಡೆಸುತ್ತಿದ್ದಾರೆ.
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟಕ್ಕೆ ಇಳಿದಿರುವ ಆಶಾ ಕಾರ್ಯಕರ್ತೆಯರು ಪುಟ್ಟ ಪುಟ್ಟ ಮಕ್ಕಳನ್ನೂ ತಮ್ಮೊಂದಿಗೆ ಕರೆತಂದಿದ್ದಾರೆ. ಚಳಿಯ ನಡುವೆಯೇ ಪುಟಾಣಿ ಮಕ್ಕಳೊಂದಿಗೆ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾರ್ಯಕರ್ತೆಯರ ಪರಿಸ್ಥಿತಿ ಗಮನ ಸೆಳೆದಿದೆ.
ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಆರೋಗ್ಯ ಸಚಿವ ಯು.ಟಿ. ಖಾದರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಕಾರ್ಯಕರ್ತೆಯರ ಮನವಿಯನ್ನು ಸ್ವೀಕರಿಸಿ, ಅವರ ಅಹವಾಲುಗಳನ್ನು ಆಲಿಸಿದರು.
ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಆದರೆ, ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳುವವರೆಗೂ ಹೋರಾಟ ಮುಂದುವರಿಸುವುದಾಗಿ ಆಶಾ ಕಾರ್ಯಕರ್ತೆಯರು ಸ್ಪಷ್ಟಪಡಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಪ್ರಮುಖ ಬೇಡಿಕೆಗಳು:
- ವಿವಿಧ ರಾಜ್ಯಗಳಲ್ಲಿ ಹೆಚ್ಚಿಸಿರುವಂತೆ, ಕರ್ನಾಟಕದ ಆಶಾ ಕಾರ್ಯಕರ್ತೆಯರಿಗೂ ರಾಜ್ಯ ಸರ್ಕಾರದಿಂದ ಮಾಸಿಕ 15,000 ಗೌರವಧನ ನಿಗದಿಪಡಿಸಬೇಕು.
- ಸಮಸ್ತ ಆ್ಯಪ್’ ಮೂಲಕ ಒತ್ತಾಯದ ಮೊಬೈಲ್ ಕೆಲಸ ಕೈಬಿಡಬೇಕು, ಇಲ್ಲವೇ ಮೊಬೈಲ್, ಸೂಕ್ತ ಪ್ರೋತ್ಸಾಹಧನ ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
- ಈಗಾಗಲೇ ನಿವೃತ್ತರಾಗಿರುವ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ಇಡಿಗಂಟನ್ನು ಕೂಡಲೇ ಪಾವತಿಸಬೇಕು.
- ಆಶಾ ನಿಧಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರೋತ್ಸಾಹಧನಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು.
- ಆಶಾ ಸುಗಮಕಾರರನ್ನು ಮರುನೇಮಕ ಮಾಡಿ ಸೂಕ್ತ ವೇತನ ನೀಡಬೇಕು ಹಾಗೂ ಬಾಕಿ ಇರುವ ಒಂದು ವರ್ಷದ 1,500 ಪಾವತಿಸಬೇಕು.
- ಎನ್ಐಒಎಸ್ ತರಬೇತಿ ಪೂರ್ಣಗೊಳಿಸಿದ ಆಶಾ ಮತ್ತು ಸುಗಮಕಾರರಿಗೆ ಪ್ರತಿ ತರಬೇತಿಗೆ ₹5,000 ವಿಶೇಷ ಪ್ರೋತ್ಸಾಹಧನ ನೀಡಬೇಕು.
- ತೀವ್ರ ಕಾಯಿಲೆಯ ಚಿಕಿತ್ಸಾ ಅವಧಿಯಲ್ಲಿ ಕನಿಷ್ಠ ಮೂರು ತಿಂಗಳ ಗೌರವಧನ ಮತ್ತು ನಿಗದಿತ ಪ್ರೋತ್ಸಾಹಧನ ನೀಡಬೇಕು.
- ಸೇವಾ ನಿವೃತ್ತಿ ಇಡಿಗಂಟನ್ನು ಪಶ್ಚಿಮ ಬಂಗಾಳದ ಮಾದರಿಯಲ್ಲಿ 5 ಲಕ್ಷಕ್ಕೆ ಹೆಚ್ಚಿಸಬೇಕು ಎಂಬುದಾಗಿದೆ.








