Saturday, October 17, 2026
spot_imgspot_img
spot_imgspot_img

ಬೆಂಗಳೂರು: ನೆಲಮಂಗಲ ಹೆದ್ದಾರಿಯಲ್ಲಿ ಹಿಟ್‌ & ರನ್‌ಗೆ ಕೇರಳದ ಯುವತಿ ಬಲಿ

- Advertisement -
- Advertisement -

ಬೆಂಗಳೂರು: ಸ್ನೇಹಿತನ ಜೊತೆ ಟ್ರಕ್ಕಿಂಗ್‌ಗೆ ಹೋಗಿ ವಾಪಸ್‌ ಆಗುತ್ತಿದ್ದ ಯುವತಿಯೊಬ್ಬಳು ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ವೀರನಂಜಿಪುರ ಬಾರೆ ಬಳಿ ನಡೆದಿದೆ.

ಮೃತ ಯುವತಿಯನ್ನು 23 ವರ್ಷದ ಅಲೀನಾ ಎಂದು ಗುರುತಿಸಲಾಗಿದೆ. ಅಲೀನಾ ತನ್ನ ಸ್ನೇಹಿತ ಆಲ್ಬಿನ್‌ ಜೊತೆ ಬೈಕ್‌ನಲ್ಲಿ ತುಮಕೂರಿನ ದೇವರಾಯನದುರ್ಗ ಬೆಟ್ಟಕ್ಕೆ ಟ್ರಕ್ಕಿಂಗ್‌ಗೆ ಹೋಗಿದ್ದರು. ಅಲ್ಲಿಂದ ವಾಪಸ್‌ ಬೆಂಗಳೂರಿಗೆ ಬರುತ್ತಿದ್ದಾಗ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಅಲೀನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಸ್ನೇಹಿತ ಆಲ್ಬಿನ್‌ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಲೀನಾ ಮತ್ತು ಆಲ್ಬಿನ್‌ ಮೂಲತಃ ಕೇರಳದ ನಿವಾಸಿಗಳು. ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಇಂದಿರಾನಗರದ ಪಿಜಿಯಲ್ಲಿ ವಾಸವಾಗಿದ್ದರು. ಸ್ನೇಹಿತನ ಜೊತೆ ಬೆಟ್ಟಕ್ಕೆ ಹೋಗಿ ಖುಷಿಯಾಗಿ ವಾಪಸ್‌ ಬರುತ್ತಿದ್ದ ಅಲೀನಾ, ದಾರಿ ಮಧ್ಯೆಯೇ ದುರಂತ ಅಂತ್ಯ ಕಂಡಿದ್ದಾರೆ.

ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಲಾರಿ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಅಲೀನಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಶವಾಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!