


ಬೀದರ್: ಶಾಲೆಯಲ್ಲಿ ನೀಡಿದ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜಮಲಪೂರ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಮಧ್ಯಾಹ್ನ ಶಾಲೆಯಲ್ಲಿ ಎಂದಿನಂತೆ ಮಕ್ಕಳಿಗೆ ಬಿಸಿಯೂಟ ಬಡಿಸಲಾಗಿತ್ತು. ಊಟ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಮಕ್ಕಳಿಗೆ ವಾಂತಿ ಮತ್ತು ಬೇಧಿ ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಕಂಡು ಶಿಕ್ಷಕರು ಹಾಗೂ ಪೋಷಕರು ಗಾಬರಿಗೊಂಡಿದ್ದು, ತಕ್ಷಣವೇ ಎಲ್ಲರನ್ನೂ ಔರಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅನ್ನದಲ್ಲಿ ಹುಳುಗಳು ಪತ್ತೆಯಾಗಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಅಡುಗೆ ಪದಾರ್ಥಗಳನ್ನು ಸ್ವಚ್ಛಗೊಳಿಸದ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ತಹಶೀಲ್ದಾರ್ ಹಾಗೂ ಬಿಇಒ ಮಕ್ಕಳ ಆರೋಗ್ಯ ವಿಚಾರಿಸಿದರು. ಸದ್ಯ ಮಕ್ಕಳು ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.








