



ಕೊಪ್ಪಳ: ಸಿನಿಮಿಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ವೆಂಕಟೇಶ್ ಎಂಬುವವರ ಬರ್ಬರ ಕೊಲೆಗೈದ ಘಟನೆ ಗಂಗಾವತಿ ನಗರದಲ್ಲಿ ನಡೆದಿದೆ.
ಗಂಗಾವತಿ ನಗರದಲ್ಲಿ ಲೀಲಾವತಿ ಎಲುಬು ಕೀಲು ಅಸ್ಪತ್ರೆಯ ಮುಂಭಾಗದಲ್ಲಿ ಘಟನೆ ನಡೆದಿದ್ದು, ಮದ್ಯರಾತ್ರಿ 2 ಗಂಟೆಗೆ ಕಾರಿನಲ್ಲಿ ಬಂದ ಗ್ಯಾಂಗ್ ಒಂದು, ದೇವಿಕ್ಯಾಂಪ್ನಿಂದ ಗಂಗಾವತಿಗೆ ಬೈಕ್ ಮೇಲೆ ಬರ್ತಿದ್ದ ವೆಂಕಟೇಶ್ ಮೇಲೆ ಅಟ್ಯಾಕ್ ಮಾಡಿದೆ ಎನ್ನಲಾಗುತ್ತಿದೆ. ಲಾಂಗು, ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ವರದಿ ಆಗಿದೆ.
ಕೊಲೆಯಾದ ಗಂಗಾವತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ 31 ವರ್ಷದ ಯುವಕನಾಗಿದ್ದಾನೆ. ಸ್ನೇಹಿತರ ಜೊತೆ ಊಟ ಮುಗಿಸಿಕೊಂಡು ವೆಂಕಟೇಶ್ ಗಂಗಾವತಿ ಕಡೆ ಬರ್ತಿದ್ದ, ಈತನನ್ನು ಫಾಲೋ ಮಾಡಿಕೊಂಡು ಬಂದ ಗ್ಯಾಂಗ್. ಮೊದಲು ಆತನ ಬೈಕ್ಗೆ ಗುದ್ದಿ ಅಡ್ಡ ಹಾಕಿದ್ದು, ಬಳಿಕ 5-6 ಜನ ಸೇರಿ ಆತನ ಮೇಲೆ ಹಲ್ಲೆ ಮಾಡಿದ್ದು, ಲಾಂಗು-ಮಚ್ಚಿನಿಂದ ಕೊಚ್ಚಿ ಕೊಂದಿದ್ದಾರೆ ಎನ್ನಲಾಗ್ತಿದೆ.
ಘಟನಾ ಸ್ಥಳಕ್ಕೆ ಡಿವೈ ಎಸ್ಪಿ ಸಿದ್ದನಗೌಡ ಪಾಟೀಲ್ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗಂಗಾವತಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಾಲ್ಕೈದು ಜನ ಬಂದು ಹಲ್ಲೆ ಮಾಡಿದ್ದಾರೆಂಬ ಮಾಹಿತಿ ಇದೆ. ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಕೊಲೆಗೆ ಹಳೇ ದ್ವೇಷ ಕಾರಣ ಅನ್ನೋ ಮಾಹಿತಿ ಇದೆ. ಆದಷ್ಟು ಬೇಗ ಆರೋಪಿಗಳನ್ನು ಅರೆಸ್ಟ್ ಮಾಡುವುದಾಗಿ ಕೊಪ್ಪಳ ಎಸ್ ಪಿ ರಾಮ್ ಹೇಳಿದ್ದಾರೆ.
ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕೊಲೆ ಹಿನ್ನಲೆ ಪೊಲೀಸ್ ಠಾಣೆ ಎದುರು ಜನರು ಜಮಾಯಿಸಿದ್ದಾರೆ. ನೂರಾರು ಜನರು ಆಗಮಿಸಿದ ಹಿನ್ನೆಲೆ ಪೊಲೀಸ್ ಠಾಣೆಯಲ್ಲೇ ಎಸ್ಪಿ ಡಾ ರಾಮ್ ಅರಸಿದ್ದಿ ಬೀಡು ಬಿಟ್ಟಿದ್ದಾರೆ. ಮುಂಜಾಗೃತ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.








