ಪದವಿ ಮತ್ತು ಜೀವನ ಮೌಲ್ಯ ಜೊತೆಯಾಗಿ ಸಾಗಬೇಕು: ಎಸಿಪಿ ನಜ್ಮಾ ಫಾರೂಕಿ


ಮಂಗಳೂರು: ಕಲಿಕೆ ಎಂಬುದು ನಿರಂತರವಾದುದು. ಪದವಿ ಮತ್ತು ಜೀವನ ಮೌಲ್ಯಗಳು ಯಾವತ್ತೂ ಜೊತೆಜೊತೆಯಾಗಿಯೇ ಸಾಗಬೇಕು. ಶಿಕ್ಷಣದ ಜೊತೆಗೆ ಕಾನೂನಿನ ಕಟ್ಟುನಿಟ್ಟಿನ ಪಾಲನೆಯೂ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ (ಎಸಿಪಿ) ನಜ್ಮಾ ಫಾರೂಕಿ ಅಭಿಪ್ರಾಯಪಟ್ಟರು.
ಮಂಗಳೂರಿನ ಜಪ್ಪಿನಮೊಗರಿನ ಓಶಿಯನ್ ಗ್ಲೋಬಲ್ ಸ್ಕೂಲ್‌ನಲ್ಲಿ ಬ್ಲಿಸ್ ಲಂಡನ್ ಟೀಚರ್ಸ್ ಅಕಾಡೆಮಿ ವತಿಯಿಂದ ಆಯೋಜಿಸಲಾದ EDUVISTA 2026 – A Celebration of Dreams & Achievements ಕಾರ್ಯಕ್ರಮದಲ್ಲಿ 2026ನೇ ಸಾಲಿನ ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಬೆಳ್ತಂಗಡಿಯ ಹಿರಿಯ ಪತ್ರಕರ್ತ ಲ. ಅಶ್ರಫ್ ಆಲಿಕುಂಞಿ ಮಾತನಾಡಿ, ಪದವಿ ಪಡೆದವರು ಇಂದು ಕೇವಲ ಪ್ರಮಾಣಪತ್ರವನ್ನು ಮಾತ್ರ ಪಡೆಯುತ್ತಿಲ್ಲ; ಬದಲಾಗಿ ಸಮಾಜದ ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದಾರೆ. ಇದು ಕಲಿಕೆಯ ಕೊನೆಯ ದಿನವಲ್ಲ. ಕಲಿಕೆ ನಿರಂತರ ಪ್ರಕ್ರಿಯೆಯಾಗಿದೆ. ಒಬ್ಬ ಶಿಕ್ಷಕಿ ಮಗುವಿನ ಮನಸ್ಸನ್ನು ರೂಪಿಸುವಲ್ಲಿ ವಿಫಲರಾದರೆ, ಭವಿಷ್ಯದ ಸಮಾಜದ ನಿರ್ಮಾಣವೇ ದುರ್ಬಲವಾಗುವ ಅಪಾಯವಿದೆ. ಆದ್ದರಿಂದ ಶಿಕ್ಷಕ ವೃತ್ತಿಯು ಕೇವಲ ಸಂಬಳಕ್ಕಾಗಿ ಮಾಡುವ ಕೆಲಸವಾಗದೆ, ಸೇವೆಯ ರೂಪದಲ್ಲಿ ಹೊರಹೊಮ್ಮಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಓಶಿಯನ್ ಗ್ಲೋಬಲ್ ಸ್ಕೂಲ್‌ನ ಸಂಚಾಲಕ ಸಯೀದುದ್ದೀನ್ ಮಾತನಾಡಿ, ಇಂದಿನ ಶಿಕ್ಷಕರೇ ನಾಳಿನ ಭವಿಷ್ಯದ ನಿರ್ಮಾತೃಗಳನ್ನು ರೂಪಿಸುವವರು. ಶಿಕ್ಷಕರ ದುಡಿಮೆ ಕೇವಲ ಉದ್ಯೋಗವಲ್ಲ; ಅದೊಂದು ತ್ಯಾಗ ಮತ್ತು ಸಮಾಜ ನಿರ್ಮಾಣದ ಮಹತ್ತರ ಹೊಣೆಗಾರಿಕೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂತರಾಷ್ಟ್ರೀಯ ಶಿಕ್ಷಣತಜ್ಞ. ಹಾಜಿ ಶೈಖ್ ಭಾವ ಮಂಗಳೂರು ವಹಿಸಿದ್ದರು. ಬ್ಲಿಸ್ ಲಂಡನ್ ಟೀಚರ್ಸ್ ಅಕಾಡೆಮಿಯ ನಿರ್ದೇಶಕ ಪಿ.ಎ. ಉಮಾರುಲ್ ಫಾರೂಕ್ ರಝಾ ಅಮ್ಜದಿ ದಿಕ್ಸೂಚಿ ಭಾಷಣ ಮಾಡಿದರು. ನಸೀಮಾ ಖಿರಾಅತ್ ಪಠಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸಮಾಜಸೇವೆ, ಶಿಕ್ಷಣ ಹಾಗೂ ಧಾರ್ಮಿಕ ಕಲಾ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಮೂವರು ಸಾಧಕಿಯರನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಕಳದಲ್ಲಿ ಸುರಕ್ಷಾ ಸೇವಾ ಆಶ್ರಮ ಟ್ರಸ್ಟ್ ಸ್ಥಾಪಿಸಿ ಬಡವರು, ನಿರ್ಗತಿಕರು ಹಾಗೂ ಅಸಹಾಯಕರಿಗೆ ನಿರಂತರವಾಗಿ ನೆರವು ನೀಡುತ್ತಿರುವ ಆಯಿಷಾ ಮ್ಯಾಡಂ ಅವರನ್ನು ಸಮಾಜಸೇವೆಯ ಕ್ಷೇತ್ರದಲ್ಲಿನ ಅವರ ಮಾನವೀಯ ಕಾರ್ಯಗಳಿಗಾಗಿ ಸನ್ಮಾನಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಉತ್ತಮ ಶಿಕ್ಷಕಿಯಾಗಿ ಗುರುತಿಸಿಕೊಂಡು ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿರುವ ಮರಿಯಂ ಅಶ್ರಫ್ ಅವರನ್ನು ಶೈಕ್ಷಣಿಕ ಸಾಧನೆಗಾಗಿ ಗೌರವಿಸಲಾಯಿತು.
ಪವಿತ್ರ ಕುರಾನ್‌ನ ಸಂಪೂರ್ಣ 30 ಜುಝ್‌ಗಳನ್ನು ತಮ್ಮ ಕೈಬರಹದ ಮೂಲಕ ಕ್ಯಾಲಿಗ್ರಫಿ ರೂಪದಲ್ಲಿ ರಚಿಸಿರುವ ವಿಶಿಷ್ಟ ಸಾಧನೆಗಾಗಿ ಫಾತಿಮಾ ಸಜ್ಜಿಲ ಬೈತಡ್ಕ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ
ಕಾರ್ಯಕ್ರಮದ ನಿರೂಪಣೆಯನ್ನು ನಿಶ್ಚಿತಾ ಶೆಟ್ಟಿ ಮತ್ತು ಆಯಿಷಾ ನುಸೈಬಾ ನಿರ್ವಹಿಸಿದರು. ಜಿಯಾನಾ ಸ್ವಾಗತ ಭಾಷಣ ಮಾಡಿದರು. ಜಿಯಾನಾ, ಸಂಬ್ರೀನಾ ಹಾಗೂ ತಪ್ಸೀರಾ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ರೆಹನಾಜ್, ಅಫೀಜಾ ಹಾಗೂ ಹಸೀನಾ ಬೀಳ್ಕೊಡುಗೆ ಭಾಷಣ ಮಾಡಿದರು. ತೈಬಾ ವಂದನಾರ್ಪಣೆ ಸಲ್ಲಿಸಿದರು.
ಪದವಿ ಪ್ರದಾನ ಸಮಾರಂಭದ ಮೂಲಕ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಶಿಕ್ಷಕ ವೃತ್ತಿಗೆ ಹೊಸ ಹೆಜ್ಜೆಯಿಡುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಲಾಯಿತು.
ಶಿಕ್ಷಣ, ಸಮಾಜಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಲಾದ EDUVISTA 2026 ಕಾರ್ಯಕ್ರಮವು ಸಾಧಕರಿಗೆ ಗೌರವ, ವಿದ್ಯಾರ್ಥಿಗಳಿಗೆ ಪ್ರೇರಣೆ ಹಾಗೂ ಸಂಸ್ಥೆಯ ಶೈಕ್ಷಣಿಕ ಪಯಣಕ್ಕೆ ಹೊಸ ಉತ್ಸಾಹ ತುಂಬಿದ ಸಮಾರಂಭವಾಗಿ ಮೂಡಿಬಂತು.








