

ಚಂಡೀಗಢ: ಗುರುವಾರ ರಾತ್ರಿ ಮಾಲ್ಡೀವ್ಸ್‌ನಲ್ಲಿ ಸ್ಪೀಡ್‌ಬೋಟ್ ಪಲ್ಟಿಯಾಗಿ ಭಾರತದ ರ‍್ಯಾಲಿ ರೇಸ್ ದಿಗ್ಗಜ ಹರಿ ಸಿಂಗ್ (59) ನಾಪತ್ತೆಯಾಗಿದ್ದಾರೆ. ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.


ಹರಿ ಸಿಂಗ್ ಅವರ ಸ್ನೇಹಿತ, ಚಂಡೀಗಢ ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಶಶಿ ಪಾಲ್ ಸಿಂಗ್ ಗಾರ್ಚಾ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಹರಿ ಮತ್ತು ಇನ್ನೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಅವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಶುಕ್ರವಾರ ಕತ್ತಲಾದ ಕಾರಣ ಶೋಧ ಕಾರ್ಯಚರಣೆ ಸ್ಥಗಿತಗೊಳಿಸಲಾಗಿತ್ತು ಎಂದು ಹೇಳಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಫೆಲಿಧೂ ಬಳಿ ಸ್ಪೀಡ್‌ಬೋಟ್ ಪಲ್ಟಿಯಾದಾಗ ಅದರಲ್ಲಿದ್ದ 7 ಜನರ ಗುಂಪಿನಲ್ಲಿ ಸಿಂಘಾನಿಯಾ ಮತ್ತು ಹರಿ ಸಿಂಗ್ ಇದ್ದರು. ಸಿಂಘಾನಿಯಾ ಮತ್ತು ಇತರರನ್ನು ರಕ್ಷಿಸಲಾಗಿದೆ. ಹರಿ ಸಿಂಗ್ ಮತ್ತು ನಾಪತ್ತೆಯಾದ ಇನ್ನೊಬ್ಬ ವ್ಯಕ್ತಿಗಾಗಿ ಹುಡುಕಾಟ ಮುಂದುವರಿದಿದೆ.

“ಘಟನೆಯಲ್ಲಿ ಗೌತಮ್ ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುಂಬೈನಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು ಹಾಗೂ ನಾಪತ್ತೆಯಾಗಿರುವ ಮತ್ತು ಗಾಯಗೊಂಡಿರುವ ಇತರ ಸ್ನೇಹಿತರ ಕ್ಷೇಮಕ್ಕಾಗಿ ನಾವು ಪ್ರಾರ್ಥಿಸುತ್ತೇವೆ” ಎಂದು ಸಿಂಘಾನಿಯಾ ಅವರ ಆಪ್ತ ಮೂಲಗಳು ತಿಳಿಸಿದೆ.








