Thursday, November 12, 2026
spot_imgspot_img
spot_imgspot_img

ಕಿಶ್ತ್ವಾರ್‌ನಲ್ಲಿ ನಾಪತ್ತೆಯಾಗಿದ್ದ ಇಬ್ಬರು ಎಸ್‌ಪಿಒಗಳ ಮೃತದೇಹ ಪತ್ತೆ: ದೇಹದಲ್ಲಿ ಗುಂಡಿನ ಗಾಯ, ಸರ್ವಿಸ್ ವೆಪನ್ ನಾಪತ್ತೆ..!

- Advertisement -
- Advertisement -

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿಶೇಷ ಪೊಲೀಸ್‌ ಅಧಿಕಾರಿಗಳ ಮೃತದೇಹ ಇಂದು(ಗುರುವಾರ) ಮುಂಜಾನೆ ಪತ್ತೆಯಾಗಿವೆ. ಬುಲೆಟ್‌ಗಳು ತಗುಲಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅವರ ಬಳಿಯಿದ್ದ ಸೇವಾ ಶಸ್ತ್ರಾಸ್ತ್ರಗಳು (ಸರ್ವಿಸ್ ವೆಪನ್ಸ್) ನಾಪತ್ತೆಯಾಗಿದ್ದು, ಈ ಘಟನೆಯಲ್ಲಿ ಉಗ್ರರ ಕೈವಾಡವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಮೃತಪಟ್ಟವರನ್ನ ದಚ್ಚನ್ ಪ್ರದೇಶದ ಕಿಯಾರ್ ಗ್ರಾಮದ ನಿವಾಸಿಗಳಾದ ಬಾಬಿ ಚಂದ್ (57) ಮತ್ತು ರಾಶ್ಪಾಲ್ ಕುಮಾರ್ (45) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕಿಶ್ತ್ವಾರ್ ಪೊಲೀಸರ ‘ಸ್ಪೆಷಲ್ ಆಪರೇಷನ್ಸ್ ಗ್ರೂಪ್’ ಗೆ ಸೇರಿದವರಾಗಿದ್ದು, ಕಿಯಾರ್ ವಲಯದಲ್ಲಿ ನಿಯೋಜನೆಗೊಂಡಿದ್ದರು.

ಅಧಿಕಾರಿಗಳ ಪ್ರಕಾರ, ಚಂದ್ ಮತ್ತು ಕುಮಾರ್ ಅವರಿಗೆ ಮಾರ್ವಾಹ್‌ನ ಧರ್ನಾ ವಲಯದಲ್ಲಿರುವ 17ನೇ ರಾಷ್ಟ್ರೀಯ ರೈಫಲ್ಸ್ ನ ತಾತ್ಕಾಲಿಕ ಕಾರ್ಯಾಚರಣೆ ನೆಲೆಗೆ ಕರ್ತವ್ಯಕ್ಕಾಗಿ ನಿಯೋಜಿಸಲಾಗಿತ್ತು. ಬುಧವಾರ ಅವರು ಕಿಯಾರ್‌ನಲ್ಲಿರುವ ತಮ್ಮ ಶಿಬಿರದಿಂದ ಸೇನಾ ನೆಲೆಗೆ ಪ್ರಯಾಣಿಸುತ್ತಿದ್ದಾಗ ನಾಪತ್ತೆಯಾಗಿದ್ದರು, ಕರ್ತವ್ಯಕ್ಕೆ ಹಾಜರಾಗಿರಲಿಲ್ಲ.

ಇಬ್ಬರು ಅಧಿಕಾರಿಗಳು ನಾಪತ್ತೆಯಾದ ಬೆನ್ನಲ್ಲೇ ಸೇನಾ ಪಡೆ ವಿಶೇಷ ಕಾರ್ಯಾಚರಣೆ ಕೈಗೊಂಡಿತ್ತು. ಭದ್ರತಾ ಪಡೆಗಳು ದಚ್ಚನ್‌ ಪರ್ವತ ಪ್ರದೇಶ ಹಾಗೂ ದಟ್ಟಾರಣ್ಯ ಪ್ರದೇಶಗಳಲ್ಲಿ ಹುಟುಕಾಡ ನಡೆಸಿದ್ದವು. ಬಳಿಕ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಆದರೆ ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳು ನಾಪತ್ತೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ.

ಈ ಘಟನೆಯಲ್ಲಿ ಉಗ್ರರ ಕೈವಾಡವಿರುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಭ್ಯವಿರುವ ಅಂಕಿಅಂಶಗಳ ಪ್ರಕಾರ, 2026ರಲ್ಲಿ ಕಿಶ್ತ್ವಾರ್‌ನಲ್ಲಿ ನಡೆದ ಭಯೋತ್ಪಾದನಾ ಘಟನೆಗಳಲ್ಲಿ ನಾಲ್ವರು ಉಗ್ರರು ಮತ್ತು ಒಬ್ಬ ಸೇನಾ ಯೋಧ ಸೇರಿದಂತೆ ಒಟ್ಟು ಐವರು ಮೃತಪಟ್ಟಿದ್ದಾರೆ. 2025ರಲ್ಲಿ ಮೂವರು ಉಗ್ರರು ಮತ್ತು ಒಬ್ಬ ಸೇನಾ ಯೋಧ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು. 2024ರಲ್ಲಿ ನಡೆದ ಘಟನೆಗಳಲ್ಲಿ ಮೂವರು ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!