

ಮಂಗಳೂರು: ನಕಲಿ Instagram ಖಾತೆ ಮೂಲಕ ಸಾರ್ವಜನಿಕರನ್ನು ತಪ್ಪು ದಾರಿಗೆಳೆಯುತ್ತಿದ್ದ ಆರೋಪದ ಮೇಲೆ ಮಂಗಳೂರು ನಗರದ ಬಜಪೆ ಪೊಲೀಸ್ ಠಾಣೆ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ.


ಬಂಧಿತ ಆರೋಪಿತನನ್ನು ಅಭಿಶೇಕ್ ಎ. (23 ವರ್ಷ) ಎಂದು ಗುರುತಿಸಲಾಗಿದ್ದು, ಆತ ಕಾವೂರು ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿತನು mr_a_titude ಎಂಬ Instagram ಖಾತೆಯನ್ನು ಬಳಸಿಕೊಂಡು Hotel Nisarga ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದು, ಕಡಿಮೆ ದರದಲ್ಲಿ ಊಟ ನೀಡುವುದಾಗಿ ಸುಳ್ಳು ಭರವಸೆ ನೀಡಿ ಸಾರ್ವಜನಿಕರನ್ನು ಮೋಸಗೊಳಿಸುತ್ತಿದ್ದ. ಈ ಮೂಲಕ ಜನರಲ್ಲಿ ಗೊಂದಲ ಹಾಗೂ ಭಯ ಉಂಟುಮಾಡುವಂತಹ ಪ್ರಚೋದನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ದಿನಾಂಕ 08-05-2025 ರಂದು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆಯನ್ನು ಮಂಗಳೂರು ನಗರದ CEN ಅಪರಾಧ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ತನಿಖೆಯಲ್ಲಿ ಆರೋಪಿತನ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಸುರತ್ಕಲ್ ಮತ್ತು ಪಾಂಡೇಶ್ವರ ಪೊಲೀಸ್ ಠಾಣೆಗಳಲ್ಲಿ ಚೀಟಿ, ಹಲ್ಲೆ, ಮೋಸ ಹಾಗೂ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Instagram ಖಾತೆಯಲ್ಲಿನ ಪೋಸ್ಟ್‌ಗಳು ಮತ್ತು ಸಂದೇಶಗಳನ್ನು ಸಾಕ್ಷಿಯಾಗಿ ಸಂಗ್ರಹಿಸಿರುವ ಪೊಲೀಸರು ಆರೋಪಿತನನ್ನು ಬಂಧಿಸಿ, ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.








