ಧರ್ಮಸ್ಥಳ: ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಬುರುಡೆಗಳನ್ನು ತಂದಿದ್ದೇನೆ ಎಂದು ಆರೋಪ ಎದುರಿಸಿದ್ದ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಧರ್ಮಸ್ಥಳ ಠಾಣೆಗೆ ದೂರು ಸಲ್ಲಿಸಿದ್ದಾನೆ.

ಡಿ.18ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರಾದ ಚಿನ್ನಯ್ಯ, ತನ್ನಿಗೆ ಹಾಗೂ ತನ್ನ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ತಿಮರೋಡಿ ಮಹೇಶ್ ಶೆಟ್ಟಿ, ಗಿರೀಶ್ ಮಟ್ಟಣ್ಣನವರ್, ವಿಠಲಗೌಡ, ಜಯಂತ್, ಸಮೀರ್ ಎಂ.ಡಿ. ಹಾಗೂ ಅವರ ಸಂಗಡಿಗರಿಂದ ತನಗೂ ತನ್ನ ಪತ್ನಿ ಮಲ್ಲಿಕಾ ಯಾನೆ ನಾಗಮ್ಮ ಅವರಿಗೆ ಪ್ರಾಣಾಪಾಯದ ಬೆದರಿಕೆ ಇದೆ ಎಂದು ಆರೋಪಿಸಿದ್ದಾನೆ.
ಈ ಸಂಬಂಧ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಗೂ ಕುಟುಂಬಕ್ಕೂ ಯಾವುದೇ ರೀತಿಯ ತೊಂದರೆಯಾಗದಂತೆ ಪೊಲೀಸ್ ರಕ್ಷಣೆ ಒದಗಿಸುವಂತೆ ಚಿನ್ನಯ್ಯ ದೂರಿನ ಅರ್ಜಿಯಲ್ಲಿ ಮನವಿ ಮಾಡಿದ್ದಾನೆ.
ಪ್ರಕರಣವು ರಾಜ್ಯ ಮಟ್ಟದಲ್ಲಿ ಈಗಾಗಲೇ ಭಾರೀ ಚರ್ಚೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ, ಈ ದೂರು ಹೊಸ ತಿರುವು ನೀಡಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.








