

ಮಂಗಳೂರು: ಕೊರೊನಾ ನಿಯಂತ್ರಣದ ಕುರಿತು ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಲು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಪ್ರವಾಸ ಬೆಳೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಡೇ ಕ್ಷಣದಲ್ಲಿ ಇಂದಿನ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ನಿನ್ನೆಯೇ ಕರಾವಳಿಗೆ ಆಗಮಿಸಿರುವ ಬಸವರಾಜ ಬೊಮ್ಮಾಯಿ ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಿದ್ದು, ಇಂದು ಗಡಿ ಭಾಗಕ್ಕೆ ಭೇಟಿ ನೀಡಲು ನಿಶ್ಚಯಿಸಿದ್ದರು. ಆದರೆ, ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ತಮ್ಮ ಭೇಟಿಯನ್ನು ಕೊನೇ ಕ್ಷಣದಲ್ಲಿ ರದ್ದುಗೊಳಿಸಿದ್ದಾರೆ.
ಇಂದು ಬೆಳಗ್ಗೆ 8ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಗಡಿಭಾಗದ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಲು ನಿರ್ಧರಿಸಲಾಗಿತ್ತು. ಆದರೆ, ಗಡಿ ಭಾಗದಲ್ಲಿ ಕೇರಳಿಗರಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿರುವುದರಿಂದ ಅದನ್ನು ಆಧರಿಸಿ ಬಸವರಾಜ ಬೊಮ್ಮಾಯಿ ಕರಾವಳಿ ಪ್ರವಾಸ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.
ನಿನ್ನೆ ಉಡುಪಿಯಲ್ಲೇ ವಾಸ್ತವ್ಯ ಇದ್ದ ಅವರು ಇಂದು ನೇರವಾಗಿ ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಬೆಳಗ್ಗೆ 9.30 ಕ್ಕೆ ಮಂಗಳೂರಿಗೆ ಹೊರಡಲಿರುವ ಸಿಎಂ, ರಸ್ತೆ ಮಾರ್ಗದ ಮೂಲಕ ಬಜ್ಪೆ ವಿಮಾನ ನಿಲ್ದಾಣ ತಲುಪಲಿದ್ದು, 11:30 ರ ವಿಮಾನದಲ್ಲಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.



