



ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಂಕಿತಾ ಅವರ ಈ ಸಾಧನೆಗೆ ಸಿಎಂ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ. ಅಲ್ಲದೇ ಅಂಕಿತಾಗೆ ಹಾಗೂ ಆಕೆ ಓದಿದ ಶಾಲೆಗೆ ಸಿಎಂ ಬಂಪರ್ ಗಿಫ್ಟ್ ಘೋಷಿಸಿದ್ದಾರೆ.
ಇನ್ನು ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಬಂದಿದ್ದಾರೆ. . ಈ ಹಿನ್ನೆಲೆಯಲ್ಲಿ ಇವರಿಬ್ಬರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿ ಅಭಿನಂದನೆ ತಿಳಿಸಿದ್ದಾರೆ. ಅಲ್ಲದೇ ಇವರಿಬ್ಬರಿಗೂ ಮತ್ತು ಇವರು ಓದಿದ ಶಾಲೆಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನ ಘೋಷಿಸಿದ್ದಾರೆ.
ಅಂಕಿತಾ ಮತ್ತು ನವನೀತ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ, ಪೋಷಕರನ್ನೂ ಅಭಿನಂದಿಸಿದರು. ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಅಂಕಿತಾಗೆ 5 ಲಕ್ಷ ರೂ. ಹಾಗೂ ನವನೀತ್ ಗೆ 3 ಲಕ್ಷ ರೂಗಳ ನೆರವನ್ನು ಸಿಎಂ ನೀಡಿದರು. ಅಲ್ಲದೇ ಅಂಕಿತಾ ಓದಿದ ಶಾಲೆಯ ಅಭಿವೃದ್ಧಿಗೆ 1 ಕೋಟಿ ರೂ. ಹಾಗೂ ನವನೀತ್ ವ್ಯಾಸಂಗ ಮಾಡಿದ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಸಿಎಂ ಬರೆದುಕೊಂಡಿದ್ದಾರೆ.