ಬೆಂಗಳೂರು: ನಾಳೆಯಿಂದ ಬೆಂಗಳೂರಿನಲ್ಲಿ ಲಾಕ್ಡೌನ್ ಇಲ್ಲ. ಸರ್ಕಾರದ ಆರ್ಥಿಕ ಸಂಪನ್ಮೂಲ ಕ್ರೂಢೀಕರಣದ ಜವಾಬ್ದಾರಿ ಇದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಇಂದು ಸಂಜೆ 5 ಗಂಟೆಗೆ ಫೇಸ್ಬುಕ್ ಲೈವ್ನಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು ದೇಶದೆಲ್ಲೆಡೆ ಕರೊನಾ ವೈರಸ್ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಕೋವಿಡ್ ನಿಯಂತ್ರಣ ಮಾಡುವುದರಲ್ಲಿ ಪ್ರಾರಂಭದಲ್ಲಿ ನಾವು ಯಶಸ್ವಿಯಾಗಿದ್ದೆವು. ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂಡು ಹಾಗೂ ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುವುದೇನೆಂದರೆ, ಇದನ್ನು ತೊಲಗಿಸಲು ಲಾಕ್ಡೌನ್ ಒಂದೇ ಪರಿಹಾರವಲ್ಲ. ಜನರು ಕೋವಿಡ್ ತೊಲಗಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಾಸ್ಕ್ಗಳನ್ನು ಪ್ರತಿಯೊಬ್ಬರು ಧರಿಸಬೇಕು ಎಂದು ಮನವಿ ಮಾಡಿದರು.
ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ನೀವು ಎಷ್ಟರಮಟ್ಟಿಗೆ ಕಟ್ಟುನಿಟ್ಟಾಗಿ ಪಾಲನೇ ಮಾಡ್ತಿರೋ ಅಷ್ಟರಮಟ್ಟಿಗೆ ಕೋವಿಡ್ ತಡೆಯಲು ನಮ್ಮಿಂದ ಸಾಧ್ಯ. ಈಗಾಗಲೇ ನಮ್ಮೆಲ್ಲ ಸಚಿವರು, ಶಾಸಕರು, ವೈದ್ಯರು, ನರ್ಸ್ಗಳು, ಪೊಲೀಸರು ಹಾಗೂ ಆಶಾ ಕಾರ್ಯಕರ್ತರು ಕೋವಿಡ್ ತಡೆಯಲು ತಮ್ಮ ಜೀವವನ್ನೇ ಪಣವಾಗಿಟ್ಟು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ನಾವು ಬದುಕುಳಿಯಬೇಕಾದರೆ, ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಕಡ್ಡಾಯವಾಗಿ ಧರಿಸುವುದು ಮುಂತಾದ ಕ್ರಮಗಳನ್ನು ಪಾಲಿಸುವುದರಿಂದ ಕರೊನಾ ತಡೆಯಲು ಸಾಧ್ಯ ಎಂದು ತಿಳಿಸಿದರು.ಕೋವಿಡ್ ನಿಯಂತ್ರಣಕ್ಕೆ ತಜ್ಞರು ಕೊಟ್ಟಿರುವ 5ಟಿ ತಂತ್ರಗಳು ಬಹಳ ಮುಖ್ಯವಾಗಿವೆ. ಅವುಗಳೆಂದರೆ ಟ್ರೇಸ್ (ಪತ್ತೆ), ಟ್ರ್ಯಾಕ್ (ಹುಡುಕು), ಟೆಸ್ಟ್ (ಪರೀಕ್ಷೆ), ಟ್ರೀಟ್ (ಚಿಕಿತ್ಸೆ) ಹಾಗೂ ಟೆಕ್ನಾಲಜಿ (ತಂತ್ರಜ್ಞಾನ) ತಂತ್ರಗಳನ್ನು ಅಳವಡಿಸಿಕೊಳ್ಳುವುದರಲ್ಲಿ ರಾಜ್ಯ ಈಗಾಗಲೇ ಮುಂಚೂಣಿಯಲ್ಲಿದೆ. ಇದರಿಂದ ಕೋವಿಡ್ ತಡೆಯಲು ಸಾಧ್ಯ ಎಂಬುದು ನನ್ನ ನಂಬಿಕೆಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಪತ್ತೆಯಾಗಿರುವ ಶೋಂಕಿತರಲ್ಲಿ ಶೇ.80ಕ್ಕೂ ಹೆಚ್ಚು ಸೋಂಕಿತರಲ್ಲಿ ಯಾವುದೇ ರೋಗ ಲಕ್ಷಣಗಳು ಇಲ್ಲ. ಇಂತಹ ಲಘು ರೋಗ ಲಕ್ಷಣ ಇರುವವರಿಗೆ ಆಸ್ಪತ್ರೆಯ ಅವಶ್ಯಕತೆ ಇಲ್ಲ ಎಂಬುದನ್ನು ರಾಜ್ಯದ ಜನ ಮನವರಿಕೆ ಮಾಡಿಕೊಳ್ಳಬೇಕು. ಅಂತಹವರನ್ನು ಮನೆಯಲ್ಲಿ ಅಥವಾ ಕೋವಿಡ್ ಕೇರ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗುವುದು. ಸೋಂಕಿತರಲ್ಲಿ ಶೇ. 5 ರಷ್ಟು ಮಂದಿಗೆ ಮಾತ್ರ ಐಸಿಯು ಅಥವಾ ವೆಂಟಿಲೇಟರ್ ಅಗತ್ಯವಿದೆ ಎಂಬುದು ಈಗಾಗಲೇ ಅನುಭವಕ್ಕೆ ಬಂದಿರುವ ಮಾತು. ಬೆಂಗಳೂರಿನಲ್ಲಿ ಕೋವಿಡ್ ಚಿಕಿತ್ಸೆಗೆ ಈಗಾಗಲೇ 11230 ಹಾಸಿಗೆಗಳನ್ನು ಮೀಸಲಿಟ್ಟಿದ್ದೇವೆ ಎಂದರು.
ಕೋವಿಡ್ ನಿಯಂತ್ರಣ ಮಾಡಲು ಸರ್ಕಾರ ಸರ್ವ ರೀತಿಯಲ್ಲೂ ಕೆಲಸ ಮಾಡ್ತಿದೆ. ಆತ್ಮಹತ್ಯೆಯಂತಹ ಆತುರದ ನಿರ್ಧಾರ ಬೇಡವೆಂದು ಜನರಲ್ಲಿ ಮನವಿ ಮಾಡಿದ ಬಿಎಸ್ವೈ, ಮಹಾರಾಷ್ಟ್ರ, ತಮಿಳುನಾಡಿನಿಂದ ಬಂದ ಜನರಿಂದ ಪ್ರಕರಣಗಳು ಹೆಚ್ಚಾಗಿವೆ ಎಂದರು. ಖಾಸಗಿ ಆಸ್ಪತ್ರೆಗಳ ವಿಚಾರದಲ್ಲಿ ಗೊಂದಲ ಇದ್ದದ್ದು ನಿಜ. ಶೇಕಡಾ 50 ಖಾಸಗಿ ಆಸ್ಪತ್ರೆಗಳು ಬೆಡ್ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಹಾಗೂ ಇನ್ಮಂದೆ 24 ಗಂಟೆಯಲ್ಲಿ ಟೆಸ್ಟ್ ರಿಸಲ್ಟ್ ಸಿಗುತ್ತದೆ ಎಂದರು ತಿಳಿಸಿದರು.
ಬೆಂಗಳೂರಿನ ಎಂಟು ದಿಕ್ಕುಗಳಿಗೆ ಎಂಟು ಜನರಿಗೆ ಜವಾಬ್ದಾರಿ ಮತ್ತು ಬಿಬಿಎಂಪಿ ಅಧಿಕಾರಿ ನೇಮಕ ಮಾಡಲಾಗಿದೆ. ಅಲ್ಲದೆ, ಕೆಲ ಜಿಲ್ಲೆಗಳಲ್ಲಿ ಕರೊನ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಗಳಿಗೆ ಸೂಚನೆ ನೀಡಿದ್ದೇನೆ. ಬೆಂಗಳೂರು ಸೇರಿದಂತೆ ಎಲ್ಲ ಕಡೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಣೆ ಮಾಡುವುದಿಲ್ಲ ಎಂದು ಬಿಎಸ್ವೈ ಹೇಳಿದರು.