


ಬೆಂಗಳೂರು: ರಾಜ್ಯದಲ್ಲಿ ಹುಕ್ಕಾ ಸೇವನೆ, ಮಾರಾಟ ಬ್ಯಾನ್ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಹುಕ್ಕಾದ ಎಲ್ಲ ಬಗೆಯ ಉತ್ಪನ್ನಗಳ ಮಾರಾಟ, ಸೇವನೆ, ಜಾಹೀರಾತು, ಸೇವನೆಗೆ ಪ್ರಚೋದನೆ, ಸಂಗ್ರಹಣೆ ನಿಷೇಧ ಮಾಡಿ ತಕ್ಷಣದಿಂದಲೇ ಆದೇಶ ಜಾರಿಗೆ ಬರುವಂತೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ರಾಜ್ಯ ಆರೋಗ್ಯ ಇಲಾಖೆ ಆಧೀನ ಕಾರ್ಯದರ್ಶಿ ಪದ್ಮಾ ವಿ ಅವರು, ಸಾರ್ವಜನಿಕರ ಆರೋಗ್ಯ ಕಾಪಾಡುವುದಕ್ಕೆ ಸಂವಿಧಾನದ 47ನೇ ವಿಧಿ ಪ್ರಕಾರ ಈ ಆದೇಶ ಹೊರಡಿಸಿದ್ದಾರೆ.
ನಿಕೋಟಿನ್ ಹಾಗೂ ನಿಕೋಟಿನ್ ರಹಿತ ಹುಕ್ಕಾ, ಸ್ವಾದಭರಿತ, ಮೊಲಾಸಿಸ್, ಶಿಶಾ ಒಳಗೊಂಡ ಹುಕ್ಕಾ ನಿಷೇಧವಾಗಲಿದೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಕೋಟ್ಪಾ ಕಾಯ್ದೆ, ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಕರ್ನಾಟಕ ವಿಷ ಕಾಯ್ದೆ, ಭಾರತೀಯ ದಂಡ ಸಂಹಿತೆ, ಅಗ್ನಿ ನಿಯಂತ್ರಣ ಮತ್ತು ಸುರಕ್ಷತಾ ಕಾಯ್ದೆಗಳ ಅಡಿಯಲ್ಲಿ ಕ್ರಮ ಎಂದು ಆದೇಶದಲ್ಲಿ ಹೇಳಲಾಗಿದೆ.
ಇದನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಸಿಒಟಿಪಿಎ ಕಾಯ್ದೆ-2003, ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದೆ 2015, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006, ಕರ್ನಾಟಕ ವಿಷ(ಸ್ವಾಧೀನ ಮತ್ತು ಮಾರಾಟ) ನಿಯಮ 2015 ಮತ್ತು ಭಾರತೀಯ ದಂಡ ಸಂಹಿತ ಮತ್ತು ಅಗ್ನಿ ನಿಯಂತ್ರಣ ಹಾಗೂ ಅಗ್ನಿ ಸುರಕ್ಷತೆ ಕಾಯ್ದೆ ಪ್ರಕಾರ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
COTPA 2003ರ ಕಾಯ್ದೆಯ ಕಲಂ 3(ಪಿ) ಶೆಡ್ಯೂಲ್ನಲ್ಲಿ ಹುಕ್ಕಾವನ್ನು ತಂಬಾಕು ಉತ್ಪನ್ನವೆಂದು ವರ್ಗೀಕರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿ ಸಮುದಾಯದವರು ತಂಬಾಕು ಸಹಿತ ಅಥವಾ ಮೊಲಾಸಸ್ ಇತರೆ ಹೆಸರಿನಿಂದ ಕರೆಯಲ್ಪಡುವ ಹುಕ್ಕಾ ಉತ್ಪನ್ನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇವನೆ ಮಾಡಿ ಮಾದಕ ವ್ಯಸನದಂತಹ ದುಶ್ಚಟಗಳಿಗೆ ಬಲಿಯಾಗುತ್ತಿರೋದು ಸರ್ಕಾರದ ಗಮನಕ್ಕೆ ಬಂದಿದೆ.
COTPA ಕಲಂ 6(ಎ) ಮತ್ತು 6 (ಬಿ) ಪ್ರಕಾರ, ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ತಂಬಾಕು ಸೇವನೆ ಮಾಡುವಂತೆ ಪ್ರಚೋದಿಸುವುದು ಹಾಗೂ ಶೈಕ್ಷಣಿಕ ಸಂಸ್ಥೆಯ ನೂರು ಗಜದ ವ್ಯಾಪ್ತಿಯಲ್ಲಿ ಹುಕ್ಕಾ ಒಳಗೊಂಡಂತೆ ಇತರೆ ತಂಬಾಕು ವಸ್ತುಗಳ ಮಾರಾಟ ಮತ್ತು ಉಪಯೋಗ ನಿಷೇಧಿಸಲಾಗಿದೆ.