Monday, September 14, 2026
spot_imgspot_img
spot_imgspot_img

ನಿರುದ್ಯೋಗಿ ಪತಿ, ಉದ್ಯೋಗಸ್ಥ ಪತ್ನಿ; ಜೀವನಾಂಶ ಹೆಚ್ಚಿಸಲು ಹೈಕೋರ್ಟ್ ನಕಾರ

- Advertisement -
- Advertisement -

ಬೆಂಗಳೂರು : ನಿರುದ್ಯೋಗಿ ಪತಿಯಿಂದ ಹೆಚ್ಚಿನ ಜೀವನಾಂಶ ಕೋರಿ ಉದ್ಯೋಗಸ್ಥ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜತೆಗೆ, ಪತ್ನಿಗೆ ಮಾಸಿಕ 9 ಸಾವಿರ ರೂ. ಜೀವನಾಂಶ ನೀಡುವಂತೆ ಪತಿಗೆ ‌ನಿರ್ದೇಶಿಸಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ರದ್ದುಪಡಿಸಲೂ ನ್ಯಾಯಾಲಯ ನಿರಾಕರಿಸಿದೆ.

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಜೀವನಾಂಶದ ಮೊತ್ತ ಹೆಚ್ಚಳ ಕೋರಿ ಪತ್ನಿ ಹಾಗೂ ಜೀವನಾಂಶ ಪಾವತಿ ಆದೇಶ ರದ್ದು ಕೋರಿ ಪತಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.ಹೈಕೋರ್ಟ್ ಆದೇಶವೇನು?ಪತಿಗೆ ಬರಬೇಕಾದ ಪೂರ್ವಜರ ಆಸ್ತಿ ಇನ್ನೂ ಹಂಚಿಕೆಯಾಗಿಲ್ಲ. ಪೂರ್ವಜರ ಆಸ್ತಿ ಇದೆ ಎಂಬ ಕಾರಣವು ಜೀವನಾಂಶ ಹೆಚ್ಚಳಕ್ಕೆ ಆಧಾರವಾಗುವುದಿಲ್ಲ. ಪತಿಯ ಪಾಲಿಗೆ 1 ಎಕರೆ ಜಮೀನಿದ್ದು, ಅದನ್ನು ಎರಡು ಬಾರಿ ಅಡಮಾನವಿಟ್ಟು ಸಾಲ ಪಡೆದಿದ್ದಾರೆ. ಒಂದು ವೇಳೆ ಸಾಲ ಪಡೆದೂ ಜೀವನಾಂಶ ನೀಡದಿದ್ದಲ್ಲಿ, ಅವರು ಜೀವನಾಂಶ ಪಾವತಿಸಲು ಸಿದ್ಧರಿಲ್ಲ ಎಂದು ತಿಳಿಯಬಹುದು. ಆದರೆ, ಸಾಲ ಪಡೆದ ನಂತರ ಪತ್ನಿಗೆ ಜೀವನಾಂಶ ನೀಡುತ್ತಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.ಹಾಲಿ ಪ್ರಕರಣದಲ್ಲಿ ಪತ್ನಿ ದುಡಿಯುತ್ತಿದ್ದು, ಪತಿ ನಿರುದ್ಯೋಗಿಯಾಗಿದ್ದಾರೆ. ದಂಪತಿಯ ವಿವಾದದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಆದ್ದರಿಂದ, ನಿರ್ವಹಣಾ ವೆಚ್ಚ ಹೆಚ್ಚಳ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ದಂಪತಿ ಸಲ್ಲಿಸಿದ್ದ ಎರಡೂ ಪ್ರತ್ಯೇಕ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ.

ಪ್ರಕರಣವೇನು?

ಅರ್ಜಿದಾರ ದಂಪತಿ 2009ರಲ್ಲಿ ವಿವಾಹವಾಗಿದ್ದು, ಪತಿ ಹೆಚ್ಚುವರಿ ವರದಕ್ಷಿಣೆ ತರುವಂತೆ ಪದೇಪದೆ ಒತ್ತಾಯಿಸುತ್ತಾ, ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿ ಪತ್ನಿ ಪ್ರಕರಣ ಹೂಡಿದ್ದರು. ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ, ಪತ್ನಿಗೆ ಯಾವುದೇ ರೀತಿಯ ಕೌಟುಂಬಿಕ ಹಿಂಸಾಚಾರ ನೀಡದಂತೆ ನಿರ್ಬಂಧಿಸಿ ಆದೇಶಿಸಿತ್ತಲ್ಲದೆ, ಪತ್ನಿಗೆ ಜೀವನಾಂಶಕ್ಕಾಗಿ ಮಾಸಿಕ 4 ಸಾವಿರ ರೂ. ಹಾಗೂ ಮನೆ ಬಾಡಿಗೆಗಾಗಿ 5 ಸಾವಿರ ರೂ. ಸೇರಿ ಮಾಸಿಕ 9 ಸಾವಿರ ರೂ. ನೀಡಬೇಕು. ಜತೆಗೆ, 40 ಸಾವಿರ ರೂ.ಗಳನ್ನು ಪಾವತಿಸಬೇಕು ಎಂದು ಸೂಚನೆ ನೀಡಿತ್ತು. ಈ ಆದೇಶವನ್ನು ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ದೃಢೀಕರಿಸಿತ್ತು. ಇದರಿಂದ, ಜೀವನಾಂಶ ಪಾವತಿ ಆದೇಶ ರದ್ದು ಕೋರಿ ಪತಿ ಹಾಗೂ ಜೀವನಾಂಶ ಹೆಚ್ಚಳಕ್ಕೆ ಕೋರಿ ಪತ್ನಿ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಪತಿ ಪರ ವಕೀಲರು, ಅರ್ಜದಾರರು ಈ ಹಿಂದೆ ನಡೆಸುತ್ತಿದ್ದ ಶಾಲೆ ಈಗ ಮುಚ್ಚಲ್ಪಟ್ಟಿದ್ದು, ಸದ್ಯ ನಿರುದ್ಯೋಗಿಯಾಗಿದ್ದಾರೆ. ಪತ್ನಿ ಉದ್ಯೋಗದಲ್ಲಿರುವುದರಿಂದ ಆಕೆಗೆ ಜೀವನಾಂಶ ನೀಡಲು ಪತಿಗೆ ಸಾಧ್ಯವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ಪತ್ನಿಯ ಪರ ವಕೀಲರು, ಪತಿಗೆ ಪೂರ್ವಜರ ಆಸ್ತಿಯಲ್ಲಿ ಪಾಲಿದ್ದು, ಅವರ ಹೆಸರಿನಲ್ಲಿಯೂ ಆಸ್ತಿಗಳಿವೆ. ಆದರೆ, ನ್ಯಾಯಾಲಯಕ್ಕೆ ಮಾಹಿತಿಯನ್ನು ತಿಳಿಸದೆ ಮರೆಮಾಚುತ್ತಿದ್ದಾರೆ. ಜತೆಗೆ, ಪತ್ನಿ ಉದ್ಯೋಗದಲ್ಲಿರುವುದು ಜೀವನಾಂಶ ನೀಡುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ವಾದ ಮಂಡಿಸಿದ್ದರು.

- Advertisement -

Related news

error: Content is protected !!