





ಬೆಂಗಳೂರು: ಡಿಜಿಟಲ್ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್ ಹೆಸರಲ್ಲಿ 17.6 ಲಕ್ಷ ರೂ. ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಸಂಜಯ ನಗರದಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ಇಬ್ಬರು ಕಾಶ್ಮೀರ ಪ್ರಜೆಗಳು ಸೇರಿ 12 ಜನರನ್ನು ಬಂಧಿಸಿ, ಅವರ ಬಳಿ ಇದ್ದ13.90 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ 6 ದ್ವಿಚಕ್ರ ವಾಹನ, 1 ಕಾರು ಹಾಗೂ 13 ಮೊಬೈಲ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಮುಜಾಮಿಲ್(23), ಶೋಯೆಬ್(20), ಕರೀಂ(31), ವಾಸೀಂ(40), ಮೊಹಮ್ಮದ್ ಇಸ್ಮೈಲ್(29), ರೆಹಾನ್(27), ಆಯನ್(21), ಅಖಿಲ್ ಮೊಹಮ್ಮದ್(26), ತೌಸಿಫ್(32). ಲಿಯಾಕತ್ ಶರೀಫ್(33), ಅಫ್ಜಲ್ ಖಾನ್(27), ಇಮ್ರಾನ್ ಪಾಷಾ(40) ಬಂಧಿತರು.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಶ್ವಾಸ್ ಎಂಬುವವರು ಕಾಫಿ ಶಾಪ್ ಆರಂಭಿಸಲು ತಯಾರಿ ನಡೆಸುತ್ತಿದ್ದರು. ಇದಕ್ಕಾಗಿ ಕಿಚನ್ ಟೈಲ್ಸ್ ಹಾಗೂ ಕಟ್‌ಲೇರಿ ವಸ್ತುಗಳನ್ನ ಹುಡುಕಾಡುತ್ತಿದ್ದ ವೇಳೆ ಆರೋಪಿಗಳು ಈ ವಸ್ತುಗಳನ್ನು ಚೀನಾ, ಜಪಾನ್‌ನಲ್ಲಿ ಖರೀದಿಸಿದರೆ ಕಡಿಮೆಗೆ ಸಿಗಲಿದೆ ಎಂದು ನಂಬಿಸಿದರು. ಅದರಂತೆ ಕಳೆದ 9ನೇ ತಾರೀಖು ಹಣ ಎಕ್ಸ್‌ಚೇಂಜ್‌ಗೆ ತಂದಿದ್ದ ವೇಳೆ ಆರೋಪಿಗಳು ಬೈಕ್‌ನಲ್ಲಿ ಬಂದು ಹಣ ಕಸಿದುಕೊಂಡು ಎಸ್ಕೇಪ್ ಆಗಿದ್ದರು.
ಈ ಸಂಬಂಧ ವಿಶ್ವಾಸ್ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು 12 ಜನರನ್ನು ಬಂಧಿಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.







