ವ್ಯಕ್ತಿಯ ಬಂಧನ, 4.5 ಲೀಟರ್ ಮದ್ಯ ವಶ






ವಿಟ್ಲ: ಮಂಗಿಲಪದವು ಬಸ್ ತಂಗುದಾಣದ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಜೂನ್ 26ರ ರಾತ್ರಿ ವೇಳೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಅವರಿಗೆ ಅಕ್ರಮ ಮದ್ಯ ಮಾರಾಟದ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು.
ಈ ವೇಳೆ ಮಂಗಿಲಪದವು ಬಸ್ ತಂಗುದಾಣದ ಬಳಿ ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತನು ವಿಟ್ಲ ಕಸಬಾ ನಿವಾಸಿ ಲಕ್ಷ್ಮಣಗೌಡ (54) ಎಂದು ತಿಳಿದುಬಂದಿದೆ.
ಆತನ ಬಳಿಯಿದ್ದ ಚೀಲವನ್ನು ತಪಾಸಣೆ ನಡೆಸಿದಾಗ ವಿವಿಧ ಮಾದರಿಯ ಒಟ್ಟು 4.5 ಲೀಟರ್ ಮದ್ಯ ಹಾಗೂ ಮದ್ಯ ಮಾರಾಟದಿಂದ ಸಂಗ್ರಹವಾಗಿದ್ದ 300 ರೂಪಾಯಿ ನಗದು ಪತ್ತೆಯಾಗಿದೆ.
ಯಾವುದೇ ಪರವಾನಿಗೆ ಇಲ್ಲದೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಮದ್ಯವನ್ನು ತನ್ನ ಸ್ವಾಧೀನದಲ್ಲಿ ಇರಿಸಿಕೊಂಡಿರುವುದು ದೃಢಪಟ್ಟಿದೆ.
ಪೊಲೀಸರು ಮದ್ಯವನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 141/2026ರಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 15, 32 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.








