



ನೆಲಮಂಗಲ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕಾನ್ಸ್ ಟೇಬಲ್ ಮಹಿಳೆಯೊಬ್ಬರು ಮ್ಯಾಟ್ರಿಮೋನಿ ತಾಣದಲ್ಲಿ ಪರಿಚಯವಾದ ವ್ಯಕ್ತಿಯಿಂದ 18 ಲಕ್ಷ ರೂ. ವಂಚನೆಗೆ ಒಳಗಾಗಿರುವ ಘಟನೆ ವರದಿಯಾಗಿದೆ.ವಂಚನೆಗೈದ ಆರೋಪಿ ತೆಲಂಗಾಣದ ಅಶೋಕ್ ಮುಸ್ತಿ ಎಂದು ತಿಳಿದು ಬಂದಿದೆ.ಸಂತ್ರಸ್ತೆಯು ಕನ್ನಡ ಮ್ಯಾಟ್ರಿಮೋನಿ ಮತ್ತು ಯಾದವ ಮ್ಯಾಟ್ರಿಮೋನಿ ತಾಣಗಳಲ್ಲಿ ಜೀವನ ಸಂಗಾತಿಯನ್ನು ಹುಡುಕುತ್ತಿರುವಾಗ ಅಶೋಕ್ ಮುಸ್ತಿ ಎಂಬಾತ ಪರಿಚಯವಾಗಿದ್ದಾನೆ. ತೆಲಂಗಾಣ ಮೂಲದವನಾದ ಆತ, ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ಮಾಡುತ್ತಿದ್ದೇನೆ ಎಂದು ನಂಬಿಸಿ, ಮದುವೆ ಮಾತುಕತೆ ಮುಗಿಸಿ ವಂಚನೆ ಎಸಗಿದ್ದಾನೆ ಎಂದು ಮಹಿಳೆ ತಿಳಿಸಿದ್ದಾಳೆ.ಮದುವೆಯಾಗುವ ನೆಪದಲ್ಲಿ ಆಗಾಗ ಮನೆಗೂ ಬರುತ್ತಿದ್ದ ಆರೋಪಿ, ಮದುವೆಗಾಗಿ ವರದಕ್ಷಿಣೆ ಹಣವಾಗಿ 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಮೋಸದ ಜಾಲದ ಅರಿವಾಗದ ಸಂತ್ರಸ್ತೆ ಯುವಕ ಹೇಳಿದ ಬ್ಯಾಂಕ್ ಖಾತೆಗೆ 18 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಆದರೆ ಆ ನಂತರ ಒಂದೊಂದೆ ನೆಪ ಹೇಳಿ ಮದುವೆ ನಿರಾಕರಿಸಿದ್ದ. ಈ ಕುರಿತು ಸಂತ್ರಸ್ತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ತೆಲಂಗಾಣದ ಅಶೋಕ್ ಮುಸ್ತಿ ಮತ್ತು ಆತನ ಕುಟುಂಬದವರ ವಿರುದ್ಧ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದಾರೆ. ಅಶೋಕ್ ಹಾಗೂ ಆತನ ಸಂಬಂಧಿಕರು 18 ಲಕ್ಷ ರೂ. ಪಡೆದಿದ್ದು, ಇದೀಗ ಒಬ್ಬೊಬ್ಬರಾಗಿ ಈಕೆಯ ಜೊತೆ ಸಂಪರ್ಕ ಕಡಿದುಕೊಂಡಿದ್ದಾರೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದಾಬಸ್ ಪೇಟೆ ಪೊಲೀಸರು ಸಂತ್ರಸ್ತೆಯ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಪತ್ತೆಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.








