ವಿಟ್ಲ: ಪ್ರಸ್ತುತ ಮೆಸ್ಕಾಂ ಇಲಾಖೆ ವಿದ್ಯುತ್ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ನೀಡದೇ ವಿದ್ಯುತ್ ಗ್ರಾಹಕರಿಗೆ ತೊಂದರೆ ಯಾಗುತ್ತಿದ್ದು, ಈ ಬಗ್ಗೆ ಮೆಸ್ಕಾಂ ಇಲಾಖೆ ಮತ್ತು ಸರ್ಕಾರದ ಬೇಜಾಬ್ದಾರಿಯನ್ನು ಖಂಡಿಸಿ ಬಂಟ್ವಾಳ ವಿದ್ಯುತ್ ಬಳಕೆದಾರರ ಸಾರ್ವಜನಿಕ ಹೋರಾಟ ಸಮಿತಿ ವತಿಯಿಂದ ಇದೇ ಸೆಪ್ಟೆಂಬರ್ 7ರ ಸೋಮವಾರ ವಿಟ್ಲ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿ ಅಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ತಿಳಿಸಿದರು.
ಈಗಾಗಲೇ ಸಾರ್ವಜನಿಕರಿಗೆ ವಿದ್ಯುತ್ ಬಿಲ್ ತಡವಾಗಿ ನೀಡಲಾಗುತ್ತಿದೆ. ಒಂದು ಕಡೆ ಕೊರೊನಾ ಸಂಕಷ್ಟ ಇನ್ನೊಂದೆಡೆ ವಿಳಂಭವಾಗಿ ವಿದ್ಯುತ್ ಬಿಲ್ ನೀಡುವುದರಿಂದ ಬಡ, ಮಧ್ಯಮ ವರ್ಗದವರಿಗೆ ಹೊರೆಯಾಗಿದೆ. ಹಳೆಯ ಮೀಟರ್ ರೀಡರ್ಸ್ ಗಳ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಅವರನ್ನು ಅವರನ್ನೇ ನೇಮಕ ಮಾಡಿ ವಿದ್ಯುತ್ ಬಳಕೆದಾರರಿಗೆ ಅನ್ಯಾಯವಾಗದಂತೆ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ಸರ್ಕಾರ ಮತ್ತು ಮೆಸ್ಕಾಂ ಇಲಾಖೆ ಮೇಲಿದೆ ಎಂದು ತಿಳಿಸಿದರು.
ಸಮಿತಿ ಗೌರವಾಧ್ಯಕ್ಷ ರಮಾನಾಥ ವಿಟ್ಲ ಮಾತನಾಡಿ ಮೀಟರ್ ರೀಡಿಂಗ್ ಅನ್ನು ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರರು ಕಾರ್ಮಿಕ ಇಲಾಖೆಯ ಮಾನದಂಡಗಳನ್ನು ಪಾಲನೆ ಮಾಡುತ್ತಿಲ್ಲ. ಮೀಟರ್ ರೀಡರ್ ಗಳಿಗೆ ಕಾರ್ಮಿಕ ಇಲಾಖೆಯ ಸ್ಕೇಲ್ ನಂತೆ ಸಂಬಳವನ್ನು ಕೊಡದೆ ಅತೀ ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ನೌಫಲ್ ಕುಡ್ತಮುಗೇರು, ಜತೆ ಕಾರ್ಯದರ್ಶಿ ಬಿ.ಕೆ ಪ್ರಸಾದ್ ಅನಂತಾಡಿ ಉಪಸ್ಥಿತರಿದ್ದರು.