ಇನ್‌ಸ್ಟಾಗ್ರಾಂ ನಕಲಿ ಖಾತೆ ಮೂಲಕ ಕಾಲೇಜು ವಿದ್ಯಾರ್ಥಿನಿಯ ಮುಖವನ್ನು ನಗ್ನ ಚಿತ್ರದೊಂದಿಗೆ ಎಡಿಟ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯೋರ್ವನಿಗೆ ಕಾರವಾರದ ಸಿಜೆಎಂ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಕುಮಟಾ ತಾಲ್ಲೂಕಿನ ಬಾಡದ ಜೇಷ್ಠಪುರದ ಸಂಜಯ ಭಾಸ್ಕರ ನಾಯ್ಕ ಶಿಕ್ಷೆಗೊಳಗಾದ ಅಪರಾಧಿ. ಈತ 02-12-2021 ರಂದು ನಕಲಿ ಇನ್ ಸ್ಟಾಗ್ರಾಂ ಖಾತೆ ಸೃಷ್ಟಿಸಿ ಕಾಲೇಜು ವಿದ್ಯಾರ್ಥಿನಿಯ ಇನ್ ಸ್ಟಾಗ್ರಾಂ ಖಾತೆಗೆ ನಗ್ನ ಚಿತ್ರಕ್ಕೆ ಅವಳ ಮುಖವನ್ನು ಎಡಿಟ್ ಮಾಡಿ ಆಶ್ಲೀಲ ಫೋಟೋ ಕಳುಹಿಸಿದ್ದ. ಅಲ್ಲದೆ ಪೋಟೋ ಡಿಲೀಟ್ ಮಾಡಲು 5000 ರೂಪಾಯಿ ಬೇಡಿಕೆ ಇಟ್ಟಿದ್ದ. ಜೊತೆಗೆ ಅಥವಾ ನಗ್ನವಾಗಿ ವಿಡಿಯೋ ಕಾಲ್ ಮಾಡುವಂತೆ ಬೆದರಿಕೆ ಹಾಕಿದ ಕಾರಣ ವಿದ್ಯಾರ್ಥಿನಿಯ ಸಹೋದರ ಕಾರವಾರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದರಂತೆ SEN ಪೊಲೀಸ್ ಠಾಣಾಧಿಕಾರಿ ನಿತ್ಯಾನಂದ ಪಂಡಿತ ಮಾಹಿತಿ ತಂತ್ರಜ್ಞಾನ ಕಾಯ್ದೆ 66(ಸಿ) 66(ಡಿ),67(ಏ) ಮತ್ತು ಭಾದಂಸಂ ಕಲಂ 384, 509, 511, 292.ರ ಅಪರಾಧದ ಕುರಿತು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಅದರಂತೆ ವಿಚಾರಣೆ ನಡೆಸಿದ ಸಿಜೆಎಮ್ ನ್ಯಾಯಾಲಯವು ಆರೋಪಿ ಭಾಸ್ಕರ ನಾಯ್ಕ ಈತನಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಅಲ್ಲದೆ ದಂಡದ ಪೈಕಿ ನೊಂದ ಬಾಲಕಿಗೆ 75000 ರೂಪಾಯಿ ಪರಿಹಾರ ನೀಡಲು ಮತ್ತು 25000 ರೂಪಾಯಿ ಸರ್ಕಾರಕ್ಕೆ ಜಮಾಮಾಡಲು ನ್ಯಾಯಾಧೀಶರಾದ ರೇಷ್ಮಾ ರೊಡ್ರಿಗ್ರೀಸ್ ರವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಕಾರವಾರದ ಮಂಜುನಾಥ ಹೊನ್ನಯ್ಯ ನಾಯ್ಕ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.