ರಸ್ತೆ ಅಪಘಾತದಲ್ಲಿ ತಲೆಗೆ ಏಟಾಗಿ 11 ತಿಂಗಳ ಮಗು ಮೃತಪಟ್ಟಿರುವ ದಾರುಣ ಘಟನೆ ಮುಂಬಯಿಯ ಭಾಯಂದರ್ ನಲ್ಲಿ ನಡೆದಿದೆ.
ಭಾಯಂದರ್‌ನ ಉತ್ತಾನ್ ರಸ್ತೆಯಲ್ಲಿರುವ ರಾಯ್ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಘಟನೆಯಲ್ಲಿ 11 ತಿಂಗಳ ದಕ್ಷ್ ಷಾ ಮೃತಪಟ್ಟಿದ್ದಾನೆ. ಭಾನುವಾರ ದಕ್ಸ್ ಅವರ ತಾಯಿ ಜಿಗ್ನಾ ಅವರ ಹುಟ್ಟುಹಬ್ಬವಿತ್ತು. ಈ ಕಾರಣದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಕುಟುಂಬ ಬೈಕ್ ನಲ್ಲಿ ಗೊರೈ ಬೀಚ್‌ಗೆ ತೆರಳುತ್ತಿತ್ತು. ಮಗು ದಕ್ಷ್ ಮುಂದೆ ಟ್ಯಾಂಕ್ ಬಳಿ ಕೂತಿದ್ದು, ಮಗುವಿನ ತಾಯಿ ಮತ್ತು ಅಕ್ಕ ಬೈಕ್ ನ ಹಿಂದೆ ಕೂತಿದ್ದರು.
ಹುಟ್ಟುಹಬ್ಬದ ಪ್ರಯುಕ್ತ ಬೀಚ್ ಗೆ ಹೋಗುತ್ತಿದ್ದ ಮಾರ್ಗದಲ್ಲಿ ಕೆಸರು ತುಂಬಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಕೆಳಗೆ ಬಿದ್ದಿದೆ. ಪರಿಣಾಮ ತಂದೆ, ತಾಯಿ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಮುಂದೆ ಕೂತಿದ್ದ ದಕ್ಸ್ ತಲೆಗೆ ತೀವ್ರತರದ ಗಾಯವಾಗಿದೆ. ಪರಿಣಾಮ ಮಗು ತಕ್ಷಣ ಕೊನೆಯುಸಿರೆಳೆದಿದೆ ಎಂದು ವರದಿ ತಿಳಿಸಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಮರಣ ವರದಿ ದಾಖಲಾಗಿದೆ.