Sunday, July 26, 2026
spot_imgspot_img
spot_imgspot_img

ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ದಲಿತ ಮಹಿಳೆಗೆ ಕರ್ತವ್ಯಕ್ಕೆ ಅಡ್ಡಿ

- Advertisement -
- Advertisement -

ದಲಿತ ಸಂಘಟನೆಯ ಮುಖ್ಯಸ್ಥರಾದ ಬಿ.ಕೆ. ಸೇಸಪ್ಪ ಬೆದ್ರಕಾಡು ನೇತೃತ್ವದಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ

ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಸಿಬ್ಬಂದಿ ವರ್ಗದವರು ಕಳೆದ 24 ವರ್ಷಗಳಿಂದ ಕೆಲಸ ಮಾಡುತ್ತಿದ್ದ ದಲಿತ ಮಹಿಳೆಯೊಬ್ಬರಿಗೆ ಜಾತಿ ನಿಂದನೆ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರಕರಣ ದಾಖಲಾಗಿ ಅದಕ್ಕೆ ಆರೋಪಿಗಳ ಪರವಾಗಿ ನ್ಯಾಯಾಲಯದಿಂದ ಮದ್ಯಂತರ ತಡೆ ಸಿಕ್ಕಿದ್ದು, ಇದೀಗ ಇಂದು ನೇರಳಕಟ್ಟೆ ಸಹಕಾರಿ ಸಂಘದ ಕಚೇರಿಯ ಮುಂಭಾಗದಲ್ಲಿ ಸಂತ್ರಸ್ತ ಮಹಿಳೆಯ ಪರವಾಗಿ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಯುವುದರ ಮೂಲಕ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.

ನೇರಳಕಟ್ಟೆ ಸಹಕಾರಿ ಸಂಘದಲ್ಲಿ ಸುಮಾರು ಎರಡು ದಶಕಗಳಿಂದ ಕ್ಲರ್ಕ್ ಕೆಲಸ ಮಾಡುತ್ತಿದ್ದ ಸೇಸಮ್ಮ ಎಂಬ ಮಹಿಳೆಯ ಮೇಲೆ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶೋಧ ಮತ್ತು ಪ್ರಭಾರ ಮ್ಯಾನೇಜರ್ ಯತೀಶ್ ಗೌಡ ಅವರು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಜೊತೆಗೆ ಸೇಸಮ್ಮ ಅವರಿಗೆ ಕೆಲಸಕ್ಕೆ ಬರದಂತೆ ಸೂಚಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆಯೂ ದೂರಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಧ್ಯಕ್ಷರು ಮತ್ತು ಸಿಬ್ಬಂದಿ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ದೂರುದಾರರ ಮೇಲೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಇಂದು ನೇರಳಕಟ್ಟೆ ಸಹಕಾರಿ ಸಂಘದ ಕಚೇರಿಯ ಮುಂಭಾಗದಲ್ಲಿ ಸಂತ್ರಸ್ತ ಮಹಿಳೆಯ ಪರವಾಗಿ ವಿವಿಧ ದಲಿತ ಸಂಘಟನೆಗಳು ಮತ್ತು ಬೆಂಬಲಿಗರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ದಲಿತ ಸಂಘಟನೆಯ ಮುಖ್ಯಸ್ಥರಾದ ಬಿ.ಕೆ. ಸೇಸಪ್ಪ ಬೆದ್ರಕಾಡು ಅವರು ಮಾತನಾಡುತ್ತಾ, “ಕೋರ್ಟ್ ಆದೇಶದ ಬಗ್ಗೆ ನಮಗೆ ಗೌರವವಿದೆ, ಆದರೆ ತನಿಖೆಗೆ ತಡೆ ನೀಡಬಾರದು. 24 ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ ಮಹಿಳೆಗೆ ಅನ್ಯಾಯವಾಗಿದೆ. ಮೇಲಾಧಿಕಾರಿಗಳು ಕಛೇರಿಗೆ ಭೇಟಿ ನೀಡಿ ಸೇಸಮ್ಮ ಅವರಿಗೆ ಮೌಖಿಕವಾಗಿ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಿದ ಮೇಲೆಯೂ ಅವರಿಗೆ ಕೆಲಸ ಮಾಡಲು ಅವಕಾಶ ನೀಡದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಮತ್ತು ನೊಂದ ಮಹಿಳೆಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶವನ್ನು ನೀಡಬೇಕು ಎಂದು ಆಗ್ರಹಿಸಿದರು. ದೂರು ತಡೆಯಾಜ್ಞೆಯ ಬಗ್ಗೆ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

- Advertisement -

Related news

error: Content is protected !!